* 2024–25ನೇ ಆರ್ಥಿಕ ವರ್ಷದ ಏಪ್ರಿಲ್ನಿಂದ ಮಾರ್ಚ್ವರೆಗೆ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್ಟಿ) ಮೂಲಕ ಒಟ್ಟು ₹22.08 ಲಕ್ಷ ಕೋಟಿ ಆದಾಯ ಸಂಗ್ರಹಗೊಂಡಿದ್ದು, ಇದನ್ನು ಕೇಂದ್ರ ಸರ್ಕಾರ ಮಂಗಳವಾರ(ಏಪ್ರಿಲ್ 1) ಪ್ರಕಟಿಸಿದೆ. * 2023–24ನೇ ಆರ್ಥಿಕ ವರ್ಷದ ಈ ಅವಧಿಯೊಂದಿಗೆ ಹೋಲಿಸಿದರೆ, ಜಿಎಸ್ಟಿ ಸಂಗ್ರಹದಲ್ಲಿ ಶೇ 9.4ರಷ್ಟು ವೃದ್ಧಿಯಾಗಿದೆ ಎಂದು ತಿಳಿಸಲಾಗಿದೆ. * ಮಾರ್ಚ್ ತಿಂಗಳಲ್ಲಿ ₹1.96 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹವಾಗಿದ್ದು, ಇದರಲ್ಲಿ ಶೇ 9.9ರಷ್ಟು ಏರಿಕೆಯಾಗಿದೆ. ಈ ಆರ್ಥಿಕ ವರ್ಷದಲ್ಲಿ ಇದುವರೆಗೆ ಒದಗಿದ ಎರಡನೇ ಅತ್ಯಧಿಕ ಸಂಗ್ರಹವಾಗಿದೆ. ಏಪ್ರಿಲ್ನಲ್ಲಿ ₹2.10 ಲಕ್ಷ ಕೋಟಿ ಸಂಗ್ರಹವಾಗಿತ್ತು ಎಂದು ತಿಳಿಸಲಾಗಿದೆ. * ದೇಶೀಯ ವಹಿವಾಟು ಸಂಬಂಧಿತ ಜಿಎಸ್ಟಿ ಸಂಗ್ರಹವು ಶೇ 8.8ರಷ್ಟು ಏರಿಕೆಯಾಗಿದ್ದು, ₹1.49 ಲಕ್ಷ ಕೋಟಿ ಆಗಿದೆ. ಸರಕುಗಳ ಆಮದಿಯಿಂದ ₹46,919 ಕೋಟಿ ಸಂಗ್ರಹಗೊಂಡಿದೆ.* ಒಟ್ಟು ಸಂಗ್ರಹದಲ್ಲಿ ಕೇಂದ್ರ ಜಿಎಸ್ಟಿ ₹38,145 ಕೋಟಿ, ರಾಜ್ಯ ಜಿಎಸ್ಟಿ ₹49,891 ಕೋಟಿ, ಮತ್ತು ಸಮಗ್ರ ಜಿಎಸ್ಟಿ ₹95,853 ಕೋಟಿಯಾಗಿದೆ. ಪರಿಹಾರ ಸೆಸ್ ಮೂಲಕ ₹12,253 ಕೋಟಿ ಸಂಗ್ರಹವಾಗಿದೆ. * ಮರುಪಾವತಿ ಮೊತ್ತ ಶೇ 41ರಷ್ಟು ಹೆಚ್ಚಾಗಿ ₹19,615 ಕೋಟಿಗೆ ತಲುಪಿದೆ. ಮರುಪಾವತಿ ಬಳಿಕ ನಿವ್ವಳ ಜಿಎಸ್ಟಿ ₹1.76 ಲಕ್ಷ ಕೋಟಿ ಆಗಿದೆ. * ಜಿಎಸ್ಟಿ ಸಂಗ್ರಹದಲ್ಲಿ ಕಂಡುಬಂದ ಹೆಚ್ಚಳ ವ್ಯಾಪಾರದ ವೃದ್ಧಿಯನ್ನು ಪ್ರತಿಬಿಂಬಿಸುತ್ತದೆ. ಇದನ್ನು ಆರ್ಥಿಕ ಸ್ಥಿರತೆ ಹಾಗೂ ಕಂಪನಿಗಳ ಸುಧಾರಿತ ತೆರಿಗೆ ಪಾವತಿ ಚಟುವಟಿಕೆ ಸೂಚಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. * ಮಹಾರಾಷ್ಟ್ರ, ಹರಿಯಾಣ, ಉತ್ತರ ಪ್ರದೇಶ, ಮತ್ತು ರಾಜಸ್ಥಾನದಲ್ಲಿ ಶೇ 10ರಷ್ಟು ಹೆಚ್ಚಳವಿರುವುದು ಗಮನಕ್ಕೆ ಬಂದಿದೆ. ಗುಜರಾತ್, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಶೇ 1 ರಿಂದ ಶೇ 7ರಷ್ಟು ವೃದ್ಧಿಯಾಗಿದೆ’ ಎಂದು ಡೆಲಾಯ್ಟ್ ಇಂಡಿಯಾ ಪಾಲುದಾರ ಎಂ.ಎಸ್. ಮಣಿ ತಿಳಿಸಿದ್ದಾರೆ.