* ಕೇಂದ್ರ ಸರ್ಕಾರವು ಜಿಎಸ್ಟಿ ಹಂತಗಳನ್ನು ಕಡಿಮೆ ಮಾಡುವ ಪ್ರಸ್ತಾವವನ್ನು ಮುಂದಿರಿಸಿದ್ದು, ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ರಾಜ್ಯಗಳ ಸಚಿವರ ಗುಂಪು ಇದಕ್ಕೆ ತಾತ್ವಿಕ ಒಪ್ಪಿಗೆ ನೀಡಿದೆ.* ಈಗಿರುವ ನಾಲ್ಕು ಹಂತಗಳ ತೆರಿಗೆ ವ್ಯವಸ್ಥೆಯ ಬದಲು ಎರಡು ಹಂತಗಳ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಸ್ತಾಪವಾಗಿದೆ. ಕೆಲವು ಐಷಾರಾಮಿ ವಸ್ತುಗಳ ಮೇಲೆ ಶೇ 40ರಷ್ಟು ತೆರಿಗೆ ಹಾಗೂ ಹೆಚ್ಚುವರಿ ಸುಂಕ ವಿಧಿಸುವ ಪ್ರಸ್ತಾವವೂ ಇದೆ.* ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಪ್ರಕಾರ, ಎಲ್ಲಾ ರಾಜ್ಯಗಳು ಜನಪರ ಹಿತಕ್ಕಾಗಿ ಈ ಪ್ರಸ್ತಾವವನ್ನು ಒಪ್ಪಿವೆ.* ಆದರೆ, ಪಶ್ಚಿಮ ಬಂಗಾಳದ ಹಣಕಾಸು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು ತೆರಿಗೆ ಕಡಿತದಿಂದಾಗುವ ವರಮಾನ ನಷ್ಟದ ಲೆಕ್ಕಾಚಾರ ಪ್ರಸ್ತಾವದಲ್ಲಿ ಇಲ್ಲ ಎಂದು ಪ್ರಶ್ನೆ ಎತ್ತಿದ್ದಾರೆ.* ತೆಲಂಗಾಣದ ಉಪ ಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಅವರು ತೆರಿಗೆ ಇಳಿಕೆ ಕ್ರಮವು ರಾಜ್ಯಗಳ ಆದಾಯವನ್ನು ಕಾಪಾಡುವ ಸಮತೋಲನದ ಪರಿಹಾರ ವ್ಯವಸ್ಥೆಯೊಂದಿಗೆ ಬರಬೇಕು, ಇಲ್ಲದಿದ್ದರೆ ಬಡವರ ಹಾಗೂ ಮಧ್ಯಮ ವರ್ಗದ ಯೋಜನೆಗಳಿಗೆ ಧಕ್ಕೆಯಾಗುತ್ತದೆ ಎಂದು ಹೇಳಿದ್ದಾರೆ. ಅಂತಿಮ ತೀರ್ಮಾನವನ್ನು ಜಿಎಸ್ಟಿ ಮಂಡಳಿ ಕೈಗೊಳ್ಳಲಿದೆ.