* ಕೇಂದ್ರ ಸರ್ಕಾರ ಜಿಎಸ್ಟಿ 2.0 ಅನ್ನು ನವರಾತ್ರಿ ಮೊದಲ ದಿನ (ಸೆ.22) ಜಾರಿಗೊಳಿಸುವ ಸಾಧ್ಯತೆ ಇದೆ. ಸೆಪ್ಟೆಂಬರ್ 3-4ರಂದು ನವದೆಹಲಿನಲ್ಲಿ ಜಿಎಸ್ಟಿ ಮಂಡಳಿಯ 56ನೇ ಸಭೆ ನಡೆಯಲಿದೆ.* ಮೊದಲು ಸೆಪ್ಟೆಂಬರ್ ಕೊನೆ ಅಥವಾ ಅಕ್ಟೋಬರ್ ಮೊದಲ ವಾರ ಸಭೆ ನಡೆಸಲು ತೀರ್ಮಾನಿಸಲಾಗಿದ್ದರೂ, ರಾಜ್ಯಗಳ ಸಮಾಲೋಚನೆಯ ನಂತರ ದಿನಾಂಕವನ್ನು ಮುಂದಕ್ಕೆ ಸರಿಸಲಾಗಿದೆ.* ಹೊಸ ವ್ಯವಸ್ಥೆಯಲ್ಲಿ ಈಗಿರುವ ನಾಲ್ಕು ತೆರಿಗೆ ಶ್ರೇಣಿಗಳ ಬದಲಿಗೆ ಕೇವಲ ಶೇ.5 ಮತ್ತು ಶೇ.18 ಶ್ರೇಣಿಗಳು ಮಾತ್ರ ಇರಲಿವೆ.* ತಂಬಾಕು ಮತ್ತಿತರ ಹಾನಿಕಾರಕ ಉತ್ಪನ್ನಗಳ ಮೇಲೆ ಶೇ.40 ವಿಶೇಷ ಸುಂಕ ವಿಧಿಸಲಾಗುತ್ತದೆ. ಜಿಎಸ್ಟಿ ಸುಧಾರಣೆ ಸಂಬಂಧಿತ ಜಿಒಎಂ ಆಗಸ್ಟ್ 20-21ರಂದು ನಡೆದ ಸಭೆಯಲ್ಲಿ ಶೇ.12 ಮತ್ತು ಶೇ.28 ಶ್ರೇಣಿಗಳನ್ನು ತೆಗೆದು ಹಾಕಲು ಅನುಮೋದನೆ ನೀಡಿದೆ.* ಈ ಬದಲಾವಣೆಯಿಂದ ಕೇಂದ್ರಕ್ಕೆ ಸುಮಾರು 40,000 ಕೋಟಿ ರೂ. ಆದಾಯ ಕೊರತೆ ಉಂಟಾಗುವ ಸಾಧ್ಯತೆ ಇದೆ.* ಜೊತೆಗೆ ಆನ್ಲೈನ್ ಗೇಮಿಂಗ್ ನಿಷೇಧದಿಂದ 20,000 ಕೋಟಿ ರೂ. ನಷ್ಟವಾಗಲಿದೆ. ಆರೋಗ್ಯ ಹಾಗೂ ಜೀವ ವಿಮಾ ಕಂತುಗಳ ಮೇಲಿನ ಜಿಎಸ್ಟಿ ತೆಗೆದು ಹಾಕುವ ಪ್ರಸ್ತಾಪಕ್ಕೂ ಸಚಿವರ ಸಮಿತಿ ಅನುಮೋದನೆ ನೀಡಿದೆ.* ಆದಾಯದ ಕೊರತೆ ತಾತ್ಕಾಲಿಕವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ತೆರಿಗೆ ಕಡಿತದಿಂದ ಗ್ರಾಹಕರ ಕೈಯಲ್ಲಿ ಹೆಚ್ಚುವರಿ ಹಣ ಉಳಿದು, ಖರೀದಿಯಲ್ಲಿ ಏರಿಕೆ ಸಂಭವಿಸಬಹುದು. ಇದರಿಂದ ಜಿಎಸ್ಟಿ ಆದಾಯದ ಕೊರತೆಯನ್ನು ಸಮತೋಲನಗೊಳಿಸಲು ಸಾಧ್ಯವಾಗುತ್ತದೆ.