* ಜಾಗತಿಕ ತಾಪಮಾನ ಏರಿಕೆಯು ವಿಶ್ವದ ಪರ್ವತ ಶ್ರೇಣಿಗಳಲ್ಲಿ ಅತಿಹೆಚ್ಚು ಬದಲಾವಣೆಗಳಿಗೆ ಕಾರಣವಾಗುತ್ತಿದ್ದು, ಹಿಮನದಿಗಳು ವೇಗವಾಗಿ ಕರಗುತ್ತಿವೆ. ಇದರಿಂದಾಗಿ ಹಿಮದ ಹೊದಿಕೆ ಕಡಿಮೆಯಾಗುತ್ತಿದೆ ಎಂದು ಇತ್ತೀಚಿಗೆ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ 'ವಿಶ್ವ ಜಲ ಅಭಿವೃದ್ಧಿ ವರದಿ-2025' ತಿಳಿಸಿದೆ.* ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ಹಿಮನದಿಗಳು ಕರಗಿದ್ದು, 2024ರಲ್ಲಿ ಇವು 450 ಗಿಗಾಟನ್ಗಳಷ್ಟು ದ್ರವ್ಯರಾಶಿಯನ್ನು ಕಳೆದುಕೊಂಡಿವೆ. ಕಳೆದ ವರ್ಷ `ಸ್ಯಾಂಡಿನೇವಿಯಾ, ನಾರ್ವೇಜಿಯನ್ ಸ್ವಾಲ್ವಾರ್ಡ್ ದ್ವೀಪ ಸಮೂಹ ಮತ್ತು ಉತ್ತರ ಏಷ್ಯಾದಲ್ಲಿನ ಹಿಮನದಿಗಳು ದಾಖಲೆಯ ಮಟ್ಟದಲ್ಲಿ ಕರಗಿವೆ ಎಂದು ವರದಿ ತಿಳಿಸಿದೆ.* "ಹಿಮನದಿ ಕರಗುವಿಕೆ ಹೆಚ್ಚಾಗಲು ತಾಪಮಾನವೊಂದೇ ಕಾರಣವಲ್ಲ, ಕಾಳಿಚ್ಚು ಬಿರುಗಾಳಿ, ಕಪ್ಪು ಇಂಗಾಲವೂ ಕಾರಣವಾಗಿದೆ. ಈ ಕಲ್ಮಶಗಳು ಹಿಮ ಮತ್ತು ಮಂಜುಗಡ್ಡೆಯ ಮೇಲ್ವೆಗಳನ್ನು ಕಪ್ಪಾಗಿಸುತ್ತದೆ. ಇದು ಸೌರ ವಿಕಿರಣಗಳನ್ನು ಹೆಚ್ಚಾಗಿ ಹೀರಿಕೊಳ್ಳಲಿದ್ದು, ನದಿಗಳು ವೇಗವಾಗಿ ಕರಗುತ್ತಿವೆ.* ಪರ್ಮಾಫ್ರಾಸ್ಟ್ ಕರಗುವಿಕೆ ವೇಗ: ಪರ್ಮಾಫ್ರಾಸ್ಟ್ ಎಂದರೆ ಕನಿಷ್ಠ ಎರಡು ವರ್ಷಗಳ ಕಾಲ 0 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಹೆಪ್ಪುಗಟ್ಟಿರುವ ಮಂಜುಗಡ್ಡೆ ವ್ಯಾಪಿಸಿರುವ ಪ್ರದೇಶ.* ಹೆಚ್ಚುತ್ತಿರುವ ತಾಪಮಾನ ಈ ಪ್ರದೇಶಗಳಲ್ಲಿ ಪರ್ಮಾಫ್ರಾಸ್ಟ್ ಅನ್ನು ವೇಗವಾಗಿ ಕರಗಿಸುತ್ತಿವೆ. ಪರ್ಮಾಫ್ರಾಸ್ಟ್ ಅಪಾರ ಪ್ರಮಾಣದ ಸಾವಯವ ಇಂಗಾಲ ಮತ್ತು ಇತರ ಪೋಷಕಾಂಶಗಳನ್ನು ಹೊಂದಿದೆ.* ಯುನೆಸ್ಕೊ ವರದಿಯ ಪ್ರಕಾರ, ಪರ್ಮಾಫ್ರಾಸ್ಟ್ ಹೊಂದಿರುವ ಪರ್ವತ ಮಣ್ಣು ಜಾಗತಿಕ ಮಣ್ಣಿನ ಸಾವಯವ ಇಂಗಾಲದ ಸರಿಸುಮಾರು ಶೇ. 4.5ರಷ್ಟು ಹೊಂದಿದೆ.* ಪರ್ಮಾಫ್ರಾಸ್ಟ್ ಕರಗುತ್ತಿದ್ದಂತೆ ಈ ಸಾವಯವ ಇಂಗಾಲವು ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಇದು ಹವಾಮಾನವನ್ನು ಇನ್ನಷ್ಟು ಹದಗೆಡಿಸುತ್ತದೆ.* ಬಹುತೇಕ ಎಲ್ಲಾ ಪರ್ವತ ಪ್ರದೇಶಗಳಲ್ಲಿ ಹಿಮದ ಹೊದಿಕೆ ಕಡಿಮೆಯಾಗಿದೆ. ಮುಂಬರುವ ದಶಕಗಳಲ್ಲಿ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.