* ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿರುವ ನಂತರ ನರೇಂದ್ರ ಮೋದಿ ಅವರು ಇಟಲಿಗೆ ಮೊದಲ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಜೂನ್ 13ರಿಂದ 17ರವರೆಗೆ ಇಟಲಿಯಲ್ಲಿ ನಡೆಯಲಿರುವ ಜಿ7 ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. * ಶೃಂಗಸಭೆಯ ಆತಿಥ್ಯ ವಹಿಸಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆಹ್ವಾನದ ಮೇರೆಗೆ ಮೋದಿ ಅವರು ತೆರಳಿದ್ದಾರೆ.* ಮುಟ್ಟುಗೋಲು ಹಾಕಿಕೊಂಡಿರುವ ರಷ್ಯಾದ ಆಸ್ತಿಗಳ ಮೇಲೆ ಉಕ್ರೇನ್‌ಗೆ 50 ಬಿಲಿಯನ್ ಡಾಲ‌ರ್ (ಸುಮಾರು ₹4.17 ಲಕ್ಷ ಕೋಟಿ) ಸಾಲ ನೀಡುವ ಒಪ್ಪಂದಕ್ಕೆ ಜೂನ್ 13 ರಂದು (ಗುರುವಾರ) ಆರಂಭವಾದ ಜಿ7 ರಾಷ್ಟ್ರಗಳ ಶೃಂಗಸಭೆ ಒಪ್ಪಿಗೆ ನೀಡಿದೆ. * ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕಾ ಜಿ7 ಶೃಂಗಸಭೆಯ ಸದಸ್ಯ ರಾಷ್ಟ್ರಗಳಾಗಿವೆ.* ಮೂರು ದಿನಗಳ ಶೃಂಗಸಭೆಗಾಗಿ ಜಿ7 ರಾಷ್ಟ್ರಗಳ ನಾಯಕರು ದಕ್ಷಿಣ ಇಟಲಿಗೆ ಬಂದಿಳಿಯುವ ಮೊದಲು ಈ ಒಪ್ಪಂದದ ಕುರಿತು ಅಂತಿಮ ನಿರ್ಧಾರಕ್ಕೆ ಬರಲಾಗಿತ್ತು ಎಂದು ರಾಜತಾಂತ್ರಿಕರು ದೃಢಪಡಿಸಿದರು.* ಉಕ್ರೇನ್‌ ಅಧ್ಯಕ್ಷ ವೊಲೊಡಿಮಿ‌ರ್ ಝಲೆನ್‌ಸ್ಕಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಪ್ರತ್ಯೇಕವಾಗಿ ದ್ವಿಪಕ್ಷೀಯ ಭದ್ರತಾ ಒಪ್ಪಂದಕ್ಕೂ ಸಹಿ ಹಾಕುವ ಸಾಧ್ಯತೆ ಇದೆ.