* ನಾಗಮಂಡಲ ತಾಲ್ಲೂಕಿನ ಆದಿಚುಂಚನಗಿರಿ ಮಠದಿಂದ ಕೊಡಮಾಡುವ 2024 ನೇ ಸಾಲಿನ 'ವಿಜ್ಞಾತಂ' ರಾಷ್ಟ್ರೀಯ ಪ್ರಶಸ್ತಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷ ಎಸ್. ಸೋಮನಾಥ್ ಅವರು ಆಯ್ಕೆಯಾಗಿದ್ದಾರೆ.* ಫೆಬ್ರುವರಿ 20ರಂದು ನಡೆಯುವ ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದಾರೆ. ಈ ಪ್ರಶಸ್ತಿಯು 5 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. * ಫೆಬ್ರುವರಿ 19 ಹಾಗೂ 20ರಂದು ಜ್ಞಾನ-ವಿಜ್ಞಾನ-ತಂತ್ರಜ್ಞಾನ ಮೇಳ ಹಾಗೂ ನಿರ್ಮಲಾನಂದನಾಥ ಸ್ವಾಮೀಜಿ ಅವರ 11ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ನಡೆಯಲಿದೆ. * ಫೆಬ್ರುವರಿ 19ರಂದು ನಡೆಯುವ ಸಮ್ಮೇಳನದಲ್ಲಿ ವಸ್ತು ಪ್ರದರ್ಶನ ಹಾಗೂ ವಿಶೇಷ ಉಪನ್ಯಾಸ ಅಯೋಜಿಸಲಾಗಿದ್ದು, ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್, ಐಐಎಸ್‌ಸಿಯ ಕೆ.ಜೆ.ವಿನೋಯ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಜೆಡಿಎಸ್ ನಾಯಕರಾದ ಸಿ.ಎಸ್.ಪುಟ್ಟರಾಜು, ಕೆ.ಸುರೇಶ್‌ಗೌಡ ಅವರು ಪಾಲ್ಗೊಳ್ಳುವರು.* ಫೆಬ್ರುವರಿ 20ರಂದು ಪಟ್ಟಾಭಿಷೇಕ ಮಹೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಹರಿಯಾಣ ರೋಹ್ನಕ್‌ನ ಬಾಬಾ ಮಸ್ತ್ನಾಥ ವಿಶ್ವವಿದ್ಯಾಲಯದ ಕುಲಪತಿ ಹಾಗೂ ರಾಜಸ್ಥಾನದ ತಿಜಾರ ಕ್ಷೇತ್ರದ ಶಾಸಕ ಮಹಾಂತ ಬಾಲಕನಾಥ ಯೋಗಿ, ಗುಜರಾತ್, ರಾಜ್‌ಕೋಟ್‌ನ ಆರ್ಶ್ ವಿದ್ಯಾಮಂದಿರದ ಸ್ವಾಮಿ ಪರಮಾತ್ಮಾನಂದ ಸರಸ್ವತಿ ಅವರು ಸಾನ್ನಿಧ್ಯ ವಹಿಸಲಿದ್ದಾರೆ.* ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿಥಿಗಳಾಗಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅವರು ಮತ್ತು ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಅಧ್ಯಕ್ಷ ಗುರುರಾಜ್ ಕರ್ಜಗಿ ಅವರು ಭಾಗವಹಿಸಲಿದ್ದಾರೆ.