➤ ಪಶ್ಚಿಮ ಏಷ್ಯಾದಲ್ಲಿ ದಶಕಗಳಿಂದ ಹೊಗೆಯಾಡುತ್ತಿದ್ದ 'ಶ್ಯಾಡೋ ವಾರ್' (ನೆರಳು ಯುದ್ಧ) ಈಗ ಅಧಿಕೃತವಾಗಿ ಮಹಾಯುದ್ಧವಾಗಿ ಮಾರ್ಪಟ್ಟಿದೆ. ಫೆಬ್ರವರಿ 28, ಶನಿವಾರದಂದು ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಜಂಟಿಯಾಗಿ ನಡೆಸಿದ ‘ಆಪರೇಷನ್ ಎಪಿಕ್ ಪ್ಯೂರಿ’ (Operation Epic Fury) ಕಾರ್ಯಾಚರಣೆಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತರಾಗಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯು ಜಾಗತಿಕ ರಾಜಕೀಯ ಮತ್ತು ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರಿದೆ.➤ ಆಪರೇಷನ್ ಎಪಿಕ್ ಪ್ಯೂರಿ: (Operation Epic Fury) ಎಂಬುದು ಇರಾನ್‌ನ ಮಿಲಿಟರಿ ಶಕ್ತಿ ಮತ್ತು ರಾಜಕೀಯ ನಾಯಕತ್ವವನ್ನು ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ಬೃಹತ್ ಸೈನಿಕ ಕಾರ್ಯಾಚರಣೆಯಾಗಿದೆ. ಈ ದಾಳಿಯಲ್ಲಿ ಇಸ್ರೇಲ್‌ನ 200ಕ್ಕೂ ಹೆಚ್ಚು ಸುಧಾರಿತ ಎಫ್-35 (F-35) ಯುದ್ಧ ವಿಮಾನಗಳು ಮತ್ತು ಅಮೆರಿಕದ ಘಾತಕ ಟಾಮ್‌ಹಾಕ್ (Tomahawk) ಕ್ಷಿಪಣಿಗಳನ್ನು ಬಳಸಲಾಗಿದೆ. ಈ ಕಾರ್ಯಾಚರಣೆಯ ಪ್ರಮುಖ ಗುರಿ ಇರಾನ್‌ನ ಪರಮಾಣು ಕೇಂದ್ರಗಳು, ಕ್ಷಿಪಣಿ ತಯಾರಿಕಾ ಘಟಕಗಳು ಮತ್ತು ಟೆಹ್ರಾನ್‌ನಲ್ಲಿರುವ ರಾಜಕೀಯ ಕೇಂದ್ರಗಳನ್ನು ಧ್ವಂಸಗೊಳಿಸುವುದಾಗಿತ್ತು. ಈ ನಿಖರ ದಾಳಿಯ ಪರಿಣಾಮವಾಗಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಅವರ ಕುಟುಂಬದ ಕೆಲವು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ, ಇದು ಇಡೀ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.➤ ಶ್ಯಾಡೋ ವಾರ್ ಟು ಡೈರೆಕ್ಟ್ ವಾರ್: ಯುದ್ಧದ ಹಿನ್ನೆಲೆ: ಇರಾನ್ ಮತ್ತು ಇಸ್ರೇಲ್ ನಡುವಿನ ಹಗೆತನಕ್ಕೆ 1979ರ ಇಸ್ಲಾಮಿಕ್ ಕ್ರಾಂತಿಯ ಇತಿಹಾಸವಿದೆ. ಅಂದಿನಿಂದ ಇಸ್ರೇಲ್ ಅನ್ನು ಶತ್ರು ಎಂದು ಘೋಷಿಸಿದ್ದ ಇರಾನ್ ಮತ್ತು ಇರಾನ್‌ನ ಪರಮಾಣು ಹಸಿವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದ ಇಸ್ರೇಲ್ ನಡುವೆ ಇದುವರೆಗೆ 'ನೆರಳು ಯುದ್ಧ' (Shadow War) ನಡೆಯುತ್ತಿತ್ತು. ಆದರೆ ಈಗ ಅದು ನೇರ ಯುದ್ಧವಾಗಿ ಮಾರ್ಪಟ್ಟಿದೆ.➤ ಇರಾನ್‌ನ ಪ್ರತೀಕಾರ ಮತ್ತು ಪ್ರಸ್ತುತ ಸ್ಥಿತಿ: ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಬೆನ್ನಲ್ಲೇ ತೀವ್ರ ಆಕ್ರೋಶಗೊಂಡಿರುವ ಇರಾನ್, ದಾಳಿಕೋರರಿಗೆ "ಪಶ್ಚಾತ್ತಾಪ ಪಡುವಂತಹ ಶಿಕ್ಷೆ" ನೀಡುವುದಾಗಿ ಘೋಷಿಸಿ ಭಾರಿ ಪ್ರತೀಕಾರಕ್ಕೆ ಇಳಿದಿದೆ. ಈಗಾಗಲೇ ಇಸ್ರೇಲ್‌ನ ರಾಜಧಾನಿ ಟೆಲ್ ಅವಿವ್ ಸೇರಿದಂತೆ ಯುಎಇ, ಕತಾರ್ ಮತ್ತು ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ನೂರಾರು ಕ್ಷಿಪಣಿಗಳನ್ನು ಉಡಾಯಿಸಿದೆ. ಈ ಉದ್ವಿಗ್ನತೆಯಿಂದಾಗಿ ಇಸ್ರೇಲ್ ದೇಶಾದ್ಯಂತ 'ತುರ್ತು ಪರಿಸ್ಥಿತಿ' ಘೋಷಿಸಿದ್ದರೆ, ಇರಾನ್‌ನಲ್ಲಿ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ. ಅಲ್ಲದೆ, ಇರಾನ್ ಸರ್ಕಾರವು ತನ್ನ ಸರ್ವೋಚ್ಚ ನಾಯಕನ ನಿಧನದ ಹಿನ್ನೆಲೆಯಲ್ಲಿ 40 ದಿನಗಳ ಶೋಕಾಚರಣೆ ಮತ್ತು 7 ದಿನಗಳ ಸಾರ್ವಜನಿಕ ರಜೆಯನ್ನು ಅಧಿಕೃತವಾಗಿ ಪ್ರಕಟಿಸಿದೆ.➤ ಜಾಗತಿಕ ನಾಯಕರ ಪ್ರತಿಕ್ರಿಯೆ: - ಡೊನಾಲ್ಡ್ ಟ್ರಂಪ್: "ಖಮೇನಿ ಎಂಬ ಇತಿಹಾಸದ ಕ್ರೂರ ವ್ಯಕ್ತಿ ಹತನಾಗಿದ್ದಾನೆ. ಇದು ವಿಶ್ವದ ಜನರಿಗೆ ಸಿಕ್ಕ ನ್ಯಾಯ," ಎಂದು ಅಮೆರಿಕ ಅಧ್ಯಕ್ಷರು ಬಣ್ಣಿಸಿದ್ದಾರೆ.- ಬ್ರಿಟನ್ ಮತ್ತು ಕೆನಡಾ: ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಮತ್ತು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರು ಅಮೆರಿಕದ ಈ ಕ್ರಮಕ್ಕೆ ಬೆಂಬಲ ಸೂಚಿಸಿದ್ದಾರೆ.- ಫ್ರಾನ್ಸ್: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಈ ದಾಳಿಯಲ್ಲಿ ತಾವು ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.➤ ಭಾರತದ ಮಧ್ಯಸ್ಥಿಕೆ ಮತ್ತು ಪ್ರಜೆಗಳ ಸುರಕ್ಷತೆ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಈ ಭೀಕರ ಸಂಘರ್ಷದ ಸಂದರ್ಭದಲ್ಲಿ ಭಾರತವು ಅತ್ಯಂತ ಸಮತೋಲಿತ ನಿಲುವು ತಳೆದಿದ್ದು, ಉಭಯ ದೇಶಗಳು ಸಂಯಮದಿಂದ ವರ್ತಿಸಿ ಮಾತುಕತೆಯ ಮೂಲಕ ಶಾಂತಿ ಸ್ಥಾಪಿಸಬೇಕೆಂದು ಪ್ರಧಾನಿ ಕಚೇರಿ ಮತ್ತು ವಿದೇಶಾಂಗ ಸಚಿವಾಲಯ ಮನವಿ ಮಾಡುವುದರ ಜೊತೆಗೆ, ಯುದ್ಧದ ಕಾರಣದಿಂದ ಭಾರತದಲ್ಲಿ ಸಿಲುಕಿರುವ ಇರಾನ್ ಹಾಗೂ ಆ ಭಾಗದ ವಿದೇಶಿ ಪ್ರಜೆಗಳಿಗೆ ತೊಂದರೆಯಾಗದಂತೆ FRRO ಮೂಲಕ ವೀಸಾ ಅವಧಿ ವಿಸ್ತರಿಸಲು ವಿಶೇಷ ಸೌಲಭ್ಯವನ್ನೂ ಕಲ್ಪಿಸಿದೆ.