* ಇಂದು(ಫೆ.28) ರಾತ್ರಿ ಸೌರಮಂಡಲದ ಏಳು ಗ್ರಹಗಳು ಒಟ್ಟಾಗಿ ಕಾಣಿಸಿಕೊಳ್ಳುವ ಅಪರೂಪದ ಆಕಾಶಕೌತುಕ ಸಂಭವಿಸಲಿದೆ. ಸೂರ್ಯಾಸ್ತದ ನಂತರ ಗೋಚರಿಸುವ ಈ ದೃಶ್ಯ ಮುಂದಿನ 15 ವರ್ಷಗಳವರೆಗೆ ಪುನರಾಗುವುದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.* ಈ ವರ್ಷದ ಮೊದಲ ತಿಂಗಳಲ್ಲೇ ಆಗಸದಲ್ಲಿ ಸೌರ ಮಂಡಲದ ಆರು ಗ್ರಹಗಳು (ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್) ಒಟ್ಟಾಗಿ ಕಾಣಿಸಿಕೊಂಡಿದ್ದವು ಶುಕ್ರವಾರ (ಫೆ.28) ಮತ್ತೊಂದು ಅಪರೂಪದ ಖಗೋಳ ವಿದ್ಯಮಾನಕ್ಕೆ ಈ ಜಗತ್ತು ಸಾಕ್ಷಿಯಾಗಲಿದೆ.* ಗ್ರಹಗಳ ಸಾಲುಗೂಡುವಿಕೆ (planetary alignment) ಖಗೋಳ ವಿಜ್ಞಾನದಲ್ಲಿ ಅಪರೂಪವಾದ ವಿದ್ಯಮಾನವಾಗಿದೆ. ಪ್ರತಿ ರಾತ್ರಿ ಕೆಲಗ್ರಹಗಳು ಬರಿ ಕಣ್ಣಿಗೆ ಗೋಚರಿಸಲಾದರೂ, ಐದಕ್ಕಿಂತ ಹೆಚ್ಚು ಗ್ರಹಗಳು ಒಂದೇ ಸಾಲಿನಲ್ಲಿ ಬರುವುದು ದುಷ್ಕರ, ಏಳು ಗ್ರಹಗಳ ಒಟ್ಟುಗೂಡುವಿಕೆ ಇನ್ನೂ ಅಪರೂಪ.* ಗ್ರಹಗಳು ಒಂದೇ ಬದಿಯಲ್ಲಿ ಸಮೀಪಿಸುತ್ತಿದ್ದರೂ ಸರಳ ರೇಖೆಯಲ್ಲಿ ಇರುವುದಿಲ್ಲ. ಇವು ‘ಇಕ್ಲಿಪ್ಟಿಕ್’ ಎಂಬ ಕಾಲ್ಪನಿಕ ಪಥದಲ್ಲಿ ಕಾಣಿಸುತ್ತವೆ, ಇದು ಭೂಮಿಯಿಂದ ನೋಡಿದಾಗ ಸೂರ್ಯನು ನಕ್ಷತ್ರಗಳ ನಡುವೆ ಸಾಗುವ ಹಾದಿಯಾಗಿದೆ ಎಂದು ನಾಸಾ ವಿವರಿಸುತ್ತದೆ.* ಜನವರಿ 18ರಿಂದ ಶುಕ್ರ, ಮಂಗಳ, ಗುರು, ಶನಿ, ಯುರೇನಸ್, ನೆಪ್ಚೂನ್ ಗ್ರಹಗಳು ಸಾಲಾಗಿ ಕಾಣಿಸಿಕೊಂಡಿವೆ. ಫೆಬ್ರವರಿ 22ರಿಂದ ಬುಧ ಕೂಡ ಸೇರಿಕೊಂಡಿದ್ದು, ಫೆ. 28ರಂದು ಏಳು ಗ್ರಹಗಳ ಅಪರೂಪದ ನೋಟ ಲಭ್ಯವಾಗಲಿದೆ. ಮಾರ್ಚ್ 1ರಿಂದ ಶನಿ ಮರೆಯಾಗಲಿದೆ. ಆಗಸ್ಟ್ನಲ್ಲಿ ಮತ್ತೆ ನಾಲ್ಕು ಗ್ರಹಗಳು ಒಟ್ಟಾಗಿ ಕಾಣಲಿವೆ.* ಶುಕ್ರವಾರ ಸಂಜೆ ಸೂರ್ಯಾಸ್ತದ ಬಳಿಕ, ಭಾರತದೆಲ್ಲೆಡೆ ಅಪರೂಪದ ಖಗೋಳಿಕ ದೃಶ್ಯ ವೀಕ್ಷಿಸಬಹುದು. ಬುಧ, ಶುಕ್ರ, ಮಂಗಳ, ಗುರು, ಶನಿ ಗ್ರಹಗಳು ಬರಿ ಕಣ್ಣಿಗೆ ಕಾಣಲಿದ್ದು, ಯುರೇನಸ್ ಮತ್ತು ನೆಪ್ಚೂನ್ ವೀಕ್ಷಿಸಲು ಬೈನಾಕ್ಯುಲರ್ ಅಥವಾ ದೂರದರ್ಶಕ ಬೇಕು. ಶುಕ್ರ ಮತ್ತು ಗುರು ಹೆಚ್ಚು ಪ್ರಕಾಶಮಾನವಾಗಿದ್ದು, ಮಂಗಳ ನಸುಗೆಂಪು ಬಣ್ಣದಲ್ಲಿ ಕಾಣಿಸುತ್ತದೆ. ಬುಧ ಮತ್ತು ಶನಿ ಶೀಘ್ರ ದಿಗಂತಕ್ಕೆ ಅಳಿದುಹೋಗುವುದರಿಂದ, ಅವುಗಳ ವೀಕ್ಷಣೆಗೆ ಕೆಲವೇ ನಿಮಿಷಗಳ ಅವಕಾಶ ಮಾತ್ರ ಸಿಗಲಿದೆ.