* ಭಾರತೀಯ ನೌಕಾಪಡೆಯ ಬಲ ಹೆಚ್ಚಿಸುವ ನಿಟ್ಟಿನಲ್ಲಿ ವಿಧ್ವಂಸಕ ನೌಕೆ ಐಎನ್ಎಸ್ ನೀಲಗಿರಿ ಹಾಗೂ ಅತ್ಯಾಧುನಿಕ ಯುದ್ಧನೌಕೆ ಐಎನ್ಎಸ್ ಸೂರತ್ ಮತ್ತು ಅತ್ಯಂತ ಪ್ರಭಾವಶಾಲಿ ಸಬ್ಮರೀನ್ ಐಎನ್ಎಸ್ ವಾಗ್ಶಿರ್ ನೌಕೆಗಳನ್ನು ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಬುಧವಾರ (ಜ.15) ಲೋಕಾರ್ಪಣೆಗೊಳಿಸಿದ್ದಾರೆ.* ದೇಶಿ ನಿರ್ಮಿತವಾದ ಈ 3 ನೌಕೆಗಳನ್ನು ಒಂದೇ ಬಾರಿಗೆ ನಿಯೋಜಿಸಿರುವುದು ಇದೇ ಮೊದಲು.* ಐಎನ್ಎಸ್ ನೀಲಗಿರಿ : ಇದು ಪ್ರಾಜೆಕ್ಟ್ 17 ಆಲ್ಫಾದ ಮೊದಲ ಶ್ರೇಣಿಯ ನೌಕೆ. ಇದು ಶತ್ತು ದೇಶಗಳ ರೇಡಾರ್ ಕಣ್ಣಿಗೆ ಸಿಗದು. ಕಡಲ ಕಣ್ಣಾವಲಿಗೆ ಅಗತ್ಯವಿರುವ ಸುಧಾರಿತ ವಿನ್ಯಾಸದ ರಕ್ಷಣಾ ಸಾಧನಗಳನ್ನು ಇದು ಒಳಗೊಂಡಿದೆ. ಶತ್ರು ನೌಕೆಗಳ ಮೇಲೆ ಅತಿ ಹತ್ತಿರದಿಂದ ದಾಳಿ ನಡೆಸುವ ಕೋವಿಗಳನ್ನು ಒಳಗೊಂಡಿದೆ.* ಐಎನ್ಎಸ್ ಸೂರತ್ : ಪ್ರಾಜೆಕ್ಟ್-15 ಬ್ರಾವೋ ಶ್ರೇಣಿಯ ನಾಲ್ಕವೇ ಯುದ್ಧನೌಕೆ ಇದು. ಗುರಿ ನಿರ್ದೇಶಿತ ಕ್ಷಿಪಣಿಗಳನ್ನು ಧ್ವಂಸಗೊಳಿಸುತ್ತದೆ. ಇದು ಸೂಪರ್ಸಾನಿಕ್ ಬ್ರಹ್ಮಸ್ ಕ್ಷಿಪಣಿಗಳು ಮತ್ತು ಬರಾಕ್-8 ಮಧ್ಯಮ ಶ್ರೇಣಿಯ ಕ್ಷಿಪಣಿಗಳಿಂದ ಶಸ್ತ್ರಸಜ್ಜಿತವಾಗಿದೆ. ಜಲಾಂತರ್ಗಾಮಿ ನೌಕೆಗಳನ್ನು ಧ್ವಂಸಗೊಳಿಸುವ ದೇಶೀಯವಾಗಿ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರಗಳು ಮತ್ತು ಸೆನ್ಸರ್ಗಳು, ಭಾರಿ ತೂಕದ ಕ್ಷಿಪಣಿಗಳು ಮತ್ತು ರಾಕೆಟ್ ಲಾಂಚರ್ಗಳನ್ನು ಇದಕ್ಕೆ ಅಳವಡಿಸಲಾಗಿದೆ.* ಐಎನ್ಎಸ್ ವಾಗ್ಶಿರ್ : 6ನೇ ಸ್ಕಾರ್ಪಿನ್ ಶ್ರೇಣಿಯ ಜಲಾಂತರ್ಗಾಮಿ ನೌಕೆ ಇದು. ಡೀಸೆಲ್- ವಿದ್ಯುತ್ ಚಾಲಿತವಾದುದು. ಹಡಗು ನಿಗ್ರಹ ಕ್ಷಿಪಣಿಗಳು ಮತ್ತು ಸುಧಾರಿತ ಸೋನಾರ್ ವ್ಯವಸ್ಥೆಗಳೊಂದಿಗೆ ಶಸ್ತ್ರಸಜ್ಜಿತವಾಗಿದೆ. ಕಡಲ ಕಣ್ಣಾವಲು, ವಿಶೇಷ ಕಾರ್ಯಾಚರಣೆಗಳು, ಗೂಢಚಾರಿಕೆ ಹಾಗೂ ಮೇಲೆ ದಾಳಿ, ಜಲಾಂತರ್ಗಾಮಿ ನೌಕೆಯ ದಾಳಿಗಳನ್ನು ತಡೆಯುವ ವ್ಯವಸ್ಥೆ ಒಳಗೊಂಡಿದೆ.* ದೇಶದ ರಕ್ಷಣಾ ಉತ್ಪಾದನೆಯು ₹1.25 ಲಕ್ಷ ಕೋಟಿ ದಾಟಿದೆ. 100ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಕಳೆದ ದಶಕದಲ್ಲಿ, ಸೇರ್ಪಡೆಗೊಂಡ 40 ನೌಕಾ ಹಡಗುಗಳಲ್ಲಿ 39 ನೌಕೆಗಳು ಭಾರತೀಯ ಹಡಗು ಕಟ್ಟೆಗಳಲ್ಲಿ ನಿರ್ಮಾಣವಾಗಿವೆ. ಇದು 'ಮೇಕ್ ಇನ್ ಇಂಡಿಯಾ'ಗೆ ನಮ್ಮ ಬದ್ಧತೆಯ ಪ್ರತಿಬಿಂಬ ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ. * ಈ ಮೂರೂ ಯುದ್ಧನೌಕೆಗಳು ಮೇಡ್-ಇನ್-ಇಂಡಿಯಾ ಉತ್ಪನ್ನಗಳಾಗಿವೆ. ಆದ್ದರಿಂದ, ನಾನು ಭಾರತೀಯ ನೌಕಾಪಡೆ, ಎಂಜಿನಿಯರ್ಗಳು, ಕಾರ್ಮಿಕರು ಮತ್ತು ಇಡೀ ದೇಶವನ್ನು ಈ ಶುಭ ಸಂದರ್ಭದಲ್ಲಿ ಅಭಿನಂದಿಸಲು ಬಯಸುತ್ತೇನೆ. ರಕ್ಷಣಾ ಕ್ಷೇತ್ರದಲ್ಲಿ ಭಾರತವು ಸ್ವಾವಲಂಬಿ ಹೆಜ್ಜೆಗಳನ್ನು ಇಡುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ.." ಎಂದು ಪ್ರಧಾನಿ ಮೋದಿ ಹೇಳಿದರು.