➤ ಭಾರತ ಮತ್ತು ನೇಪಾಳದ ನಡುವಿನ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಉತ್ತರಾಖಂಡದ 'ಲಿಪುಲೇಖ್ ಪಾಸ್' (Lipulekh Pass) ಮೂಲಕ ಭಾರತವು ಕೈಲಾಸ ಮಾನಸ ಸರೋವರ ಯಾತ್ರೆಯನ್ನು ನಡೆಸಲು ಮುಂದಾಗಿರುವುದಕ್ಕೆ ನೇಪಾಳವು ತೀವ್ರ ಅಕ್ಷೇಪ ವ್ಯಕ್ತಪಡಿಸಿದೆ. ಈ ಪ್ರದೇಶವು ತನ್ನದೇ ಎಂದು ನೇಪಾಳ ಪ್ರತಿಪಾದಿಸುತ್ತಿದ್ದರೆ, ಭಾರತವು ಇದನ್ನು ಐತಿಹಾಸಿಕವಾಗಿ ತನ್ನ ಅವಿಭಾಜ್ಯ ಅಂಗ ಎಂದು ಸ್ಪಷ್ಟಪಡಿಸಿದೆ.➤ ವಿವಾದದ ಹಿನ್ನೆಲೆ : ಇತ್ತೀಚೆಗೆ ನೇಪಾಳ ಸರ್ಕಾರವು ಲಿಪುಲೇಖ್ ಪಾಸ್ ಮೇಲಿನ ತನ್ನ ಪ್ರಾದೇಶಿಕ ಹಕ್ಕನ್ನು ಪುನರುಚ್ಚರಿಸಿದೆ. ನೇಪಾಳದ ಶಿಕ್ಷಣ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಸಸ್ಮಿತ್ ಪೊಖಾರೆಲ್ ಅವರು, "ಲಿಪುಲೇಖ್ ಪಾಸ್ ನೇಪಾಳಕ್ಕೆ ಸೇರಿದ್ದು, ಈ ಬಗ್ಗೆ ನಾವು ರಾಜತಾಂತ್ರಿಕ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಿದ್ಧರಿದ್ದೇವೆ" ಎಂದು ಹೇಳಿದ್ದಾರೆ.➤ ಭಾರತದ ಖಡಕ್ ಪ್ರತಿಕ್ರಿಯೆ: ನೇಪಾಳದ ಆಕ್ಷೇಪಣೆಯನ್ನು ತಳ್ಳಿಹಾಕಿರುವ ಭಾರತ ಸರ್ಕಾರ, ಲಿಪುಲೇಖ್ ಪಾಸ್ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆ ನಡೆದುಕೊಂಡು ಬರುತ್ತಿರುವುದು ಇಂದಿನದಲ್ಲ, ಇದು 1954ರಿಂದಲೂ ಅಸ್ತಿತ್ವದಲ್ಲಿದೆ ಎಂದು ನೆನಪಿಸಿದೆ.- ಹಳೆಯ ಮಾರ್ಗ: ಲಿಪುಲೇಖ್ ಮಾರ್ಗವು ಅತ್ಯಂತ ಪುರಾತನವಾದದ್ದು ಮತ್ತು ಇದು ಭಾರತದ ಉತ್ತರಾಖಂಡ ರಾಜ್ಯದ ಭಾಗವಾಗಿದೆ.- ಅಭಿವೃದ್ಧಿ: ಈ ಭಾಗದಲ್ಲಿ ರಸ್ತೆ ಸಂಪರ್ಕ ಸುಧಾರಿಸುವುದು ಯಾತ್ರಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶವನ್ನು ಹೊಂದಿದೆ ಎಂದು ಭಾರತ ಹೇಳಿದೆ.➤ ಸುಗೌಲಿ ಒಪ್ಪಂದ : ಭಾರತ ಮತ್ತು ನೇಪಾಳದ ನಡುವಿನ ಗಡಿ ವಿವಾದವು 1816ರ 'ಸುಗೌಲಿ ಒಪ್ಪಂದ'ಕ್ಕೆ ಹೋಗಿ ತಲುಪುತ್ತದೆ.ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ನೇಪಾಳ ರಾಜರ ನಡುವೆ ನಡೆದ ಈ ಒಪ್ಪಂದದ ಪ್ರಕಾರ, 'ಕಾಳಿ ನದಿ'ಯನ್ನು ಪಶ್ಚಿಮ ಗಡಿಯಾಗಿ ಗುರುತಿಸಲಾಗಿದೆ. ಆದರೆ, ಕಾಳಿ ನದಿಯ ಮೂಲ ಯಾವುದು ಎಂಬ ಬಗ್ಗೆ ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯವಿದೆ. ಲಿಂಪಿಯಾಧುರಾ, ಲಿಪುಲೇಖ್ ಮತ್ತು ಕಾಲಾಪಾನಿ ಪ್ರದೇಶಗಳು ಈ ನದಿಯ ಮೂಲಕ್ಕೆ ಹತ್ತಿರದಲ್ಲಿರುವುದರಿಂದ, ಇವುಗಳನ್ನು ತನ್ನ ನಕ್ಷೆಯಲ್ಲಿ ಸೇರಿಸಲು ನೇಪಾಳ ಪ್ರಯತ್ನಿಸುತ್ತಿದೆ.➤ ಕೈಲಾಸ ಮಾನಸ ಸರೋವರ ಯಾತ್ರೆ: ಲಿಪುಲೇಖ್ ಪಾಸ್ ಮೂಲಕ ಯಾತ್ರೆ ಕೈಗೊಳ್ಳುವುದು ಯಾತ್ರಾರ್ಥಿಗಳಿಗೆ ಕಡಿಮೆ ಸಮಯದಲ್ಲಿ ಮತ್ತು ಸುಲಭವಾಗಿ ಗುರಿ ತಲುಪಲು ಸಹಕಾರಿಯಾಗಿದೆ. ಚೀನಾದ ನಿಯಂತ್ರಣದಲ್ಲಿರುವ ಟಿಬೆಟ್‌ನ ಕೈಲಾಸ ಪರ್ವತಕ್ಕೆ ಹೋಗಲು ಇದು ಪ್ರಮುಖ ಹೆಬ್ಬಾಗಿಲಾಗಿದೆ.➤ ಭಾರತ ಮತ್ತು ನೇಪಾಳ ದಶಕಗಳಿಂದಲೂ ಉತ್ತಮ ಬಾಂಧವ್ಯ ಹೊಂದಿವೆ. "ರೋಟಿ-ಬೇಟಿ" ಸಂಬಂಧ ಹೊಂದಿರುವ ಈ ಎರಡು ರಾಷ್ಟ್ರಗಳು ಗಡಿ ಸಮಸ್ಯೆಯನ್ನು ರಾಜತಾಂತ್ರಿಕ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳುವುದು ಉಭಯ ದೇಶಗಳ ಹಿತದೃಷ್ಟಿಯಿಂದ ಅಗತ್ಯವಾಗಿದೆ.