➤ ಭಾರತವು 2026ನೇ ಸಾಲಿನ ಬ್ರಿಕ್ಸ್ (BRICS) ಒಕ್ಕೂಟದ ಅಧ್ಯಕ್ಷತೆಯನ್ನು ಅಧಿಕೃತವಾಗಿ ವಹಿಸಿಕೊಂಡಿದ್ದು, ಫೆಬ್ರವರಿ 9 ಮತ್ತು 10 ರಂದು ನವದೆಹಲಿಯಲ್ಲಿ ಮೊದಲ 'ಶೆರ್ಪಾಗಳ ಸಭೆ'ಯನ್ನು (Sherpas Meeting) ಯಶಸ್ವಿಯಾಗಿ ಆಯೋಜಿಸಿದೆ. ಈ ಸಭೆಯು ಮುಂಬರುವ ಶೃಂಗಸಭೆಗೆ ಬಲವಾದ ಅಡಿಪಾಯ ಹಾಕಿದೆ. ನವದೆಹಲಿಯಲ್ಲಿ ನಡೆದ ಈ ಸಭೆಯ ನೇತೃತ್ವವನ್ನು ಭಾರತದ ಬ್ರಿಕ್ಸ್ ಶೆರ್ಪಾ ಮತ್ತು ಆರ್ಥಿಕ ಸಂಬಂಧಗಳ ಕಾರ್ಯದರ್ಶಿ ಸುಧಾಕರ್ ದಲೇಲಾ ಅವರು ವಹಿಸಿದ್ದರು. ಇವರಿಗೆ ಭಾರತದ ಸೌಸ್ ಶೆರ್ಪಾ (Sous Sherpa) ಶಂಭು ಎಲ್. ಹಕ್ಕಿ ಅವರು ಸಾಥ್ ನೀಡಿದರು. ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ಸೇರಿದಂತೆ ಹೊಸ ಸದಸ್ಯ ರಾಷ್ಟ್ರಗಳಾದ ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ (UAE) ಪ್ರತಿನಿಧಿಗಳು ಭಾಗವಹಿಸಿದ್ದರು.➤ '2026ರ ಬ್ರಿಕ್ಸ್' ಭಾರತದ ಅಧ್ಯಕ್ಷತೆಯ ಧ್ಯೇಯವಾಕ್ಯ (Theme): "ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ" (Building for Resilience, Innovation, Cooperation and Sustainability) ➤ 2026ರ ಬ್ರಿಕ್ಸ್ ಶೆರ್ಪಾ ಸಭೆಯಲ್ಲಿ ಭಾರತವು ಬಹುಮುಖಿ ಕಾರ್ಯಸೂಚಿಯನ್ನು ಮಂಡಿಸಿದ್ದು, ಮುಖ್ಯವಾಗಿ ಡಿಜಿಟಲ್ ಆರ್ಥಿಕತೆ ಮತ್ತು ಕೃತಕ ಬುದ್ಧಿಮತ್ತೆಯಂತಹ (AI) ತಾಂತ್ರಿಕ ನಾವೀನ್ಯತೆಗಳಿಗೆ ಒತ್ತು ನೀಡಿದೆ. ಇದರೊಂದಿಗೆ, ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಸುಸ್ಥಿರ ಅಭಿವೃದ್ಧಿ, ಭಯೋತ್ಪಾದನೆ ನಿಗ್ರಹದ ಮೂಲಕ ಜಾಗತಿಕ ಭದ್ರತೆ, ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಹಾಗೂ ಕೃಷಿ ಆಧುನೀಕರಣದ ಕುರಿತು ಸದಸ್ಯ ರಾಷ್ಟ್ರಗಳ ನಡುವೆ ಬಲವಾದ ಸಹಕಾರವನ್ನು ಬೆಳೆಸುವ ಗುರಿಯನ್ನು ಭಾರತ ಹೊಂದಿದ್ದು, ಸಮಗ್ರ ಜಾಗತಿಕ ಅಭಿವೃದ್ಧಿಗೆ ಒತ್ತು ನೀಡಿದೆ.➤ ಕೇವಲ ಸರ್ಕಾರಿ ಮಟ್ಟದ ಮಾತುಕತೆಗಳಿಗೆ ಸೀಮಿತವಾಗದೆ, ಜನಸಾಮಾನ್ಯರನ್ನು ತಲುಪಲು ಭಾರತವು ಈ ಕೆಳಗಿನ ವೇದಿಕೆಗಳಿಗೆ ಒತ್ತು ನೀಡುತ್ತಿದೆ:- ಬ್ರಿಕ್ಸ್ ಅಕಾಡೆಮಿಕ್ ಫೋರಂ ಮತ್ತು ಥಿಂಕ್ ಟ್ಯಾಂಕ್ ಕೌನ್ಸಿಲ್.- ಬ್ರಿಕ್ಸ್ ಬಿಸಿನೆಸ್ ಕೌನ್ಸಿಲ್ ಮತ್ತು ಮಹಿಳಾ ಉದ್ಯಮ ಒಕ್ಕೂಟ.- ಯುವಜನತೆ ಮತ್ತು ಕ್ರೀಡೆ ಹಾಗೂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು.➤ ಬ್ರಿಕ್ಸ್ (BRICS) ಬಗ್ಗೆ ಪರೀಕ್ಷಾ ದೃಷ್ಟಿಯಿಂದ :- ಸ್ಥಾಪನೆ: 2001ರಲ್ಲಿ ಜಿಮ್ ಒ'ನೀಲ್ ಅವರಿಂದ 'BRIC' ಎಂಬ ಪರಿಕಲ್ಪನೆ ಮೂಡಿತು. 2006ರಲ್ಲಿ ಔಪಚಾರಿಕವಾಗಿ ಸ್ಥಾಪನೆಯಾಗಿ, 2009ರಲ್ಲಿ ಮೊದಲ ಶೃಂಗಸಭೆ ನಡೆಯಿತು.- ವಿಸ್ತರಣೆ: 2010ರಲ್ಲಿ ದಕ್ಷಿಣ ಆಫ್ರಿಕಾ ಸೇರ್ಪಡೆಯಾಯಿತು. ಇತ್ತೀಚೆಗೆ ಇರಾನ್, ಯುಎಇ, ಈಜಿಪ್ಟ್ ಮುಂತಾದ ರಾಷ್ಟ್ರಗಳು ಸೇರ್ಪಡೆಯಾಗುವ ಮೂಲಕ ಬ್ರಿಕ್ಸ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.- ಪ್ರಾಮುಖ್ಯತೆ: ವಿಶ್ವದ ಜನಸಂಖ್ಯೆಯ 42%, ಜಾಗತಿಕ ಜಿಡಿಪಿಯ (GDP) 23% ಮತ್ತು ವ್ಯಾಪಾರದ 18% ಪಾಲನ್ನು ಈ ಒಕ್ಕೂಟ ಹೊಂದಿದೆ.➤ ವಿದೇಶಿ ಪ್ರತಿನಿಧಿಗಳು ಈ ಸಂದರ್ಭದಲ್ಲಿ ದೆಹಲಿಯ ಅಕ್ಷರಧಾಮ ದೇವಸ್ಥಾನ ಮತ್ತು ಹಸ್ತಕಲಾ ಅಕಾಡೆಮಿಗೆ ಭೇಟಿ ನೀಡುವ ಮೂಲಕ ಭಾರತದ ಸಾಂಸ್ಕೃತಿಕ ರಾಜತಾಂತ್ರಿಕತೆಯನ್ನು (Soft Power) ಕಣ್ಣಾರೆ ಕಂಡರು.