➤ ಭಾರತ ಮತ್ತು ಅರಬ್ ಜಗತ್ತಿನ ನಡುವಿನ ಐತಿಹಾಸಿಕ ಬಾಂಧವ್ಯವು ಇಂದು ಹೊಸ ಎತ್ತರಕ್ಕೆ ಏರಿದೆ. ನವದೆಹಲಿಯಲ್ಲಿ ನಡೆಯುತ್ತಿರುವ 2ನೇ ಭಾರತ-ಅರಬ್ ವಿದೇಶಾಂಗ ಸಚಿವರ ಸಭೆ (IAFMM) ಕೇವಲ ರಾಜತಾಂತ್ರಿಕ ಸಭೆಯಲ್ಲ, ಇದು ಏಷ್ಯಾದ ಎರಡು ಪ್ರಬಲ ವಲಯಗಳ ನಡುವಿನ ಆರ್ಥಿಕ ಮತ್ತು ಭದ್ರತಾ ಮೈತ್ರಿಯ ಸಂಕೇತವಾಗಿದೆ.  ಭಾರತ ಮತ್ತು ಅರಬ್ ಎಮಿರೇಟ್ಸ್ (UAE) ಜಂಟಿಯಾಗಿ ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿವೆ.ಅರಬ್ ಲೀಗ್‌ನ ಎಲ್ಲಾ 22 ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರು ಮತ್ತು ಅರಬ್ ಲೀಗ್‌ನ ಪ್ರಧಾನ ಕಾರ್ಯದರ್ಶಿಗಳು ಈ ಐತಿಹಾಸಿಕ ಸಭೆಯಲ್ಲಿ ಭಾಗವಹಿಸಿದ್ದಾರೆ. - ಮೊದಲ ಭಾರತ-ಅರಬ್ ವಿದೇಶಾಂಗ ಸಚಿವರ ಸಭೆಯು 2016ರಲ್ಲಿ ಬಹ್ರೇನ್‌ನ ಮನಾಮದಲ್ಲಿ ನಡೆದಿತ್ತು. ಬರೋಬ್ಬರಿ 10 ವರ್ಷಗಳ ಸುದೀರ್ಘ ಅಂತರದ ನಂತರ ಎರಡನೇ ಸಭೆ ನಡೆಯುತ್ತಿರುವುದು ವಿಶೇಷ.- 2022ರ ಮಾರ್ಚ್‌ನಲ್ಲಿ ಭಾರತ ಮತ್ತು ಅರಬ್ ಲೀಗ್ ಸಂವಾದ ಪ್ರಕ್ರಿಯೆಯನ್ನು ಅಧಿಕೃತವಾಗಿ ಸಾಂಸ್ಥಿಕಗೊಳಿಸಲು (Institutionalization) ಸಹಿ ಹಾಕಿದವು. ಇದು ನಿರಂತರ ಸಂವಹನಕ್ಕೆ ಅಡಿಪಾಯ ಹಾಕಿಕೊಟ್ಟಿದೆ.➤ ಪ್ರಧಾನಿ ನರೇಂದ್ರ ಮೋದಿಯವರು ಅರಬ್ ನಿಯೋಗವನ್ನು ಬರಮಾಡಿಕೊಂಡು, ಅರಬ್ ರಾಷ್ಟ್ರಗಳೊಂದಿಗೆ ಭಾರತ ಹೊಂದಿರುವ ಗಾಢವಾದ ಜನ-ಜನರ ನಡುವಿನ ಸಂಬಂಧವನ್ನು (People-to-People ties) ಶ್ಲಾಘಿಸಿದರು. ಸಭೆಯಲ್ಲಿ ಮುಖ್ಯವಾಗಿ ಐದು ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ:=> ಇಂಧನ ಭದ್ರತೆ (Energy Security): ಭಾರತಕ್ಕೆ ಅತಿ ಹೆಚ್ಚು ಕಚ್ಚಾ ತೈಲ ಪೂರೈಸುವ ರಾಷ್ಟ್ರಗಳೆಂದರೆ ಅರಬ್ ರಾಷ್ಟ್ರಗಳು. ಈ ಸಂಬಂಧವನ್ನು ಕೇವಲ 'ಖರೀದಿದಾರ-ಮಾರಾಟಗಾರ' ಸಂಬಂಧದಿಂದ ದಾಟಿ 'ತಂತ್ರಜ್ಞಾನ ಪಾಲುದಾರಿಕೆ'ಗೆ ಕೊಂಡೊಯ್ಯುವುದು ಈ ಸಭೆಯ ಗುರಿ.=> ಆಹಾರ ಭದ್ರತೆ (Food Security): ಭಾರತವು ಅರಬ್ ರಾಷ್ಟ್ರಗಳಿಗೆ ಪ್ರಮುಖ ಕೃಷಿ ಉತ್ಪನ್ನಗಳ ರಫ್ತುದಾರನಾಗಿದ್ದು, 'ಇಂಡೋ-ಅರಬ್ ಫುಡ್ ಕಾರಿಡಾರ್' ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಗಿದೆ.=> ತಂತ್ರಜ್ಞಾನ ಮತ್ತು ಹೂಡಿಕೆ: ಸೌದಿ ಅರೇಬಿಯಾ ಮತ್ತು ಯುಎಇಯಂತಹ ರಾಷ್ಟ್ರಗಳು ಭಾರತದ ಡಿಜಿಟಲ್ ಮೂಲಸೌಕರ್ಯ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಆಸಕ್ತಿ ತೋರಿವೆ.➤ ಪ್ರಾದೇಶಿಕ ಶಾಂತಿ ಮತ್ತು ಪ್ಯಾಲೆಸ್ಟೈನ್ ವಿಚಾರ: ಪ್ರಧಾನಿ ಮೋದಿಯವರು ಈ ಸಭೆಯಲ್ಲಿ ಪ್ಯಾಲೆಸ್ಟೈನ್ ವಿಚಾರವಾಗಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ: ಭಾರತವು ಮೊದಲಿನಿಂದಲೂ 'ಟೂ-ಸ್ಟೇಟ್ ಸೊಲ್ಯೂಷನ್' (ಎರಡು ರಾಷ್ಟ್ರಗಳ ಪರಿಹಾರ) ಅನ್ನು ಬೆಂಬಲಿಸುತ್ತಾ ಬಂದಿದೆ ಮತ್ತು ಗಾಜಾ ಶಾಂತಿ ಯೋಜನೆಯನ್ನು ಬೆಂಬಲಿಸುವ ಮೂಲಕ, ಮಧ್ಯಪ್ರಾಚ್ಯದಲ್ಲಿ ಸ್ಥಿರತೆಯನ್ನು ಕಾಪಾಡುವಲ್ಲಿ ಅರಬ್ ಲೀಗ್‌ನ ಪಾತ್ರವನ್ನು ಭಾರತ ಶ್ಲಾಘಿಸಿದೆ.