* ಫೆಬ್ರುವರಿ 19 ರಿಂದ ಆರಂಭವಾಗುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬಹುಮಾನದ ಮೊತ್ತವನ್ನು ಶೇ 53ರಷ್ಟು ಹೆಚ್ಚಿಸಿದೆ. ಮುಂಬರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ವಿಜೇತ ತಂಡವು 2.24 ಮಿಲಿಯನ್ ಡಾಲರ್ ನಗದು ಬಹುಮಾನ ಪಡೆಯಲಿದೆ.* 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಈ ಬಾರಿ ಟೂರ್ನಮೆಂಟ್ 'ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದ್ದು, ಪಾಕಿಸ್ತಾನ ಆತಿಥೇಯ ರಾಷ್ಟ್ರವಾಗಿದೆ. ಟೂರ್ನಮೆಂಟ್ ಪಂದ್ಯಗಳು ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿವೆ. * ಫೆಬ್ರವರಿ 19 ರಂದು ಕರಾಚಿಯಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಪಂದ್ಯಾವಳಿ ಪ್ರಾರಂಭವಾಗಲಿದೆ. ಭಾರತ ತಂಡ ಫೆಬ್ರವರಿ 20 ರಂದು ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.* ಈ ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡವು ಸುಮಾರು ₹19.46 ಕೋಟಿ ಪ್ರಶಸ್ತಿ ಮೊತ್ತ (USD 2.24 million) ಪಡೆಯಲಿದೆ ಎಂದು ಪ್ರಕಟಿಸಿದೆ. ರನ್ನರ್ ಅಪ್ ಆದ ತಂಡವು ₹9.75 ಕೋಟಿ (USD 1.12 million) ಮತ್ತು ಸೆಮಿಫೈನಲ್ನಲ್ಲಿ ಸೋತ ತಂಡವು ₹4.86 ಕೋಟಿ (USD 560,000) ಗಳಿಸಲಿದೆ.* ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರತಿಯೊಂದು ಪಂದ್ಯವೂ ಮುಖ್ಯವಾಗಿರುತ್ತದೆ. ಗುಂಪು ಹಂತದಲ್ಲಿ ಪಂದ್ಯ ಗೆದ್ದರೆ ತಂಡಕ್ಕೆ 29.53 ಲಕ್ಷ ರೂ. ಸಿಗಲಿದೆ. ಐದನೇ ಮತ್ತು ಆರನೇ ಸ್ಥಾನ ಪಡೆಯುವ ತಂಡಗಳಿಗೆ 3.04 ಕೋಟಿ ರೂ. ಸಿಗಲಿದೆ. ಏಳನೇ ಮತ್ತು ಎಂಟನೇ ಸ್ಥಾನ ಪಡೆಯುವ ತಂಡಗಳಿಗೆ 1.22 ಕೋಟಿ ಪಡೆಯಲಾಗುವುದು. * ಈ ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲಾ ಎಂಟು ತಂಡಗಳಿಗೆ 1.09 ಕೋಟಿ ರೂ. ನೀಡಲಾಗುವುದು. ಈ ಪಂದ್ಯಾವಳಿಯಲ್ಲಿ ಐಸಿಸಿ ಒಟ್ಟು 6.9 ಮಿಲಿಯನ್ ಡಾಲರ್ ಅಥವಾ ಸುಮಾರು 60 ಕೋಟಿ ರೂ. ಬಹುಮಾನದ ಹಣವನ್ನು ವಿತರಿಸಲಿದೆ. * ಈ ಐಸಿಸಿ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಗ್ರೂಪ್ ಎ ನಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳಿದ್ದರೆ, ಗ್ರೂಪ್ ಬಿ ನಲ್ಲಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳಿವೆ.