* ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್ ಗಳ ಅಂತರದಲ್ಲಿ ಮಣಿಸಿ ಜಯ ಸಾಧಿಸಿರುವ ಭಾರತ, ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.* ಭಾನುವಾರ(ಮಾರ್ಚ್ 09) ದುಬೈನಲ್ಲಿ ನಡೆದ ಫೈನಲ್‌ನಲ್ಲಿ, ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 251 ರನ್ ಗಳಿಸಿತು. 252 ರನ್ ಗಳ ಗುರಿ ಬೆನ್ನಟ್ಟಿದ ಭಾರತ 49 ಓವರ್‌ಗಳಲ್ಲಿ 6 ವಿಕೆಟ್‌ಗೆ 254 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು.* ಭಾರತದ ನಾಲ್ವರು ಸ್ಪಿನ್ನರ್‌ಗಳ ತಂತ್ರ ಫಲಿಸಿತು. ನ್ಯೂಜಿಲೆಂಡ್ ಇನಿಂಗ್ಸ್ ಆರಂಭಿಸಿದ ರಚಿನ್ ರವೀಂದ್ರ ಮತ್ತು ವಿಲ್ ಯಂಗ್, ಶಮಿ ಮತ್ತು ಹಾರ್ದಿಕ್ ಎಸೆತಗಳಲ್ಲಿ ಸುಲಭವಾಗಿ ರನ್ ಸೇರಿಸಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 7.5 ಓವರ್‌ಗಳಿಗೆ 57 ರನ್ ಗಳಿಸಿದರು.* ನಂತರ ಭಾರತೀಯ ಸ್ಪಿನ್ನರ್‌ಗಳು 18 ರನ್‌ಗಳಲ್ಲೇ 3 ವಿಕೆಟ್ ತೆಗೆದು, ಕಿವೀಸ್ ರನ್ ಗಳಿಕೆಗೆ ಹಿನ್ನಡೆ ಉಂಟುಮಾಡಿದರು. ಡ್ಯಾರಿಲ್ ಮಿಚೆಲ್ ನಿಧಾನಗತಿಯ ಬ್ಯಾಟಿಂಗ್ ಮಾಡುತ್ತಿದ್ದರೂ 101 ಎಸೆತಗಳಲ್ಲಿ 63 ರನ್ ಗಳಿಸಿದರು. ಅಜೇಯ ಮಿಚೆಲ್ ಬ್ರೇಸ್‌ವೆಲ್ 40ಎಸೆತಗಳಲ್ಲೇ ವೇಗವಾಗಿ 53 ರನ್ ಗಳಿಸಿ, ನ್ಯೂಜಿಲೆಂಡ್ 251/7 ಮೊತ್ತಕ್ಕೆ ತಲುಪಿತು.* ಸ್ಪಿನ್ನರ್‌ಗಳು 38 ಓವರ್‌ಗಳಲ್ಲಿ 3.79 ಸರಾಸರಿಯಲ್ಲಿ 144 ರನ್ ನೀಡಿ 5 ವಿಕೆಟ್ ಪಡೆದರು, ಶಮಿ ಮತ್ತು ಪಾಂಡ್ಯ 12 ಓವರ್‌ಗಳಲ್ಲಿ 8.67 ಸರಾಸರಿಯಲ್ಲಿ 104 ರನ್ ನೀಡಿ ಕೇವಲ 1 ವಿಕೆಟ್ ಪಡೆದರು.* ರೋಹಿತ್ ಶರ್ಮಾ ಬಿರುಸಿನ ಆರಂಭ ನೀಡಿ 41 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಶುಭಮನ್ ಗಿಲ್ ಜೊತೆಗೂಡಿ 17 ಓವರ್‌ಗಳಲ್ಲಿ ನೂರರ ಗಡಿ ದಾಟಿಸಿದರು. 19ನೇ ಓವರ್‌ನಲ್ಲಿ ಗಿಲ್ (31) ಗ್ಲೆನ್ ಫಿಲಿಪ್ಸ್ ಕ್ಯಾಚ್ ಪಡೆದು ಔಟಾದರು. ನಂತರದ ಓವರ್‌ನಲ್ಲಿ ವಿರಾಟ್ ಕೊಹ್ಲಿ (1) ಸಹ ಔಟಾದರು.* ರೋಹಿತ್ ಶರ್ಮಾ 83 ಎಸೆತಗಳಲ್ಲಿ 76 ಗಳಿಸಿ ಔಟಾದ ಬಳಿಕ ಭಾರತದ ರನ್‌ಗತಿ ಕುಸಿಯಿತು. ಆದರೆ, ಶ್ರೇಯಸ್ ಅಯ್ಯರ್ (48) ಹಾಗೂ ಅಕ್ಷರ್ ಪಟೇಲ್ (29) ಉತ್ತಮ ಕೊಡುಗೆ ನೀಡಿದರು. ಕೊನೆಯಲ್ಲಿ ಕೆ.ಎಲ್. ರಾಹುಲ್ (34) ಮತ್ತು ರವೀಂದ್ರ ಜಡೇಜಾ (9) ಭಾರತಕ್ಕೆ ಜಯ ತಂದುಕೊಟ್ಟರು.* ಈ ಪಂದ್ಯದಲ್ಲಿ ಪತನವಾದ 13 ವಿಕೆಟ್‌ಗಳಲ್ಲಿ 10 ಸ್ಪಿನ್ನರ್‌ಗಳ ಪಾಲಾಗಿದ್ದು ವಿಶೇಷ. ಹಾರ್ದಿಕ್ ಪಾಂಡ್ಯ (18) ಕೈಲ್ ಜೇಮಿಸನ್ ಬೌಲಿಂಗ್‌ನಲ್ಲಿ ಔಟಾದರು, ಎರಡು ವಿಕೆಟ್ ವೇಗಿಗಳಿಗೆ ದಕ್ಕಿದ್ದು, ಒಂದು ರನೌಟ್ ಆಯಿತು.* ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಮೂರು ಸಲ ಜಯಿಸಿದ ಸಾಧನೆ ಮಾಡಿದೆ. 2013ರಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದು, 2002ರಲ್ಲಿ ಶ್ರೀಲಂಕಾ ಜೊತೆ ಪ್ರಶಸ್ತಿ ಹಂಚಿಕೊಂಡಿತ್ತು. ಆಸ್ಟ್ರೇಲಿಯಾ ಕೂಡ ಎರಡು ಬಾರಿ (2006, 2009) ಈ ಕಿರೀಟ ಗೆದ್ದಿದೆ.* ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ಒಂದು ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿವೆ.* ಪಂದ್ಯದ ಆಟಗಾರ ಪ್ರಶಸ್ತಿಯನ್ನು ರೋಹಿತ್ ಶರ್ಮಾ ಪಡೆದುಕೊಂಡಿದ್ದರೆ, ಸರಣಿ ಆಟಗಾರ ಪ್ರಶಸ್ತಿಯನ್ನು ನ್ಯೂಜಿಲೆಂಡ್ ತಂಡದ ರಚಿನ್ ರವೀಂದ್ರ ತಮ್ಮದಾಗಿಸಿಕೊಂಡಿದ್ದಾರೆ.* ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವು ವಿಜೇತವಾಗಿ ₹20 ಕೋಟಿ, ನ್ಯೂಜಿಲೆಂಡ್ ರನ್ನರ್ ಅಪ್ ಆಗಿ ₹10 ಕೋಟಿ ಬಹುಮಾನ ತನ್ನದಾಗಿಸಿಕೊಂಡಿತು. ಟೂರ್ನಿಯ ಒಟ್ಟು ಬಹುಮಾನ ₹60 ಕೋಟಿಯಾಗಿದ್ದು, ಐಸಿಸಿಯು ಈ ಬಾರಿ ಶೇ 53ರಷ್ಟು ನಗದು ಬಹುಮಾನ ಹೆಚ್ಚಿಸಿತ್ತು