* ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ (ನರೇಗಾ) ಅನುಷ್ಠಾನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯಿತಿಗಳಿಗೆ ನೀಡುವ ರಾಜ್ಯ ಮಟ್ಟದ ಪುರಸ್ಕಾರಕ್ಕೆ 2023-24ನೇ ಸಾಲಿಗೆ ತಾಲ್ಲೂಕಿನ ಹಕ್ಲಾಡಿ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ.* ಕಳೆದ ಸಾಲಿನಲ್ಲಿ ನರೇಗಾ ಅನುಷ್ಠಾನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಜಿಲ್ಲೆ, ತಾಲೂಕು, ಗ್ರಾ.ಪಂ.ಗಳನ್ನು ಗುರುತಿಸಿ, ಫೆ.5ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆಯುವ ನರೇಗಾ ಹಬ್ಬ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.* ಹಕ್ಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನರೇಗಾದಡಿ 40 ಮನೆ ರಚನೆ, 32 ಕೃಷಿ ಬಾವಿ, 16 ದನದ ಕೊಟ್ಟಿಗೆ ರಚನೆ, 12 ಬಚ್ಚಲು ಗುಂಡಿ, 3 ಗೊಬ್ಬರದ ಗುಂಡಿ, 1 ಹಂದಿ ಶೆಡ್, 2 ಪೌಷ್ಟಿಕ ತೋಟ ರಚನೆ, 2 ಕೋಳಿ ಶೆಡ್, 2 ಆವರಣ ಗೋಡೆ, 1 ಕಾಲು ಸಂಕ, 1 ಗಿಡ ನೆಡುವಿಕೆ, 1 ರಸ್ತೆ ರಚನೆ, 1 ಶೌಚಾಲಯ ರಚನೆ, 11 ಕಡೆ ತೋಡು ಬದಿ ಹೂಳೆತ್ತುವಿಕೆ, 4 ಕೆರೆ ಅಭಿವೃದ್ಧಿ, 2 ಕೆರೆ ರಚನೆ, 1 ಕೆರೆ ಹೂಳೆತ್ತುವಿಕೆ, 1 ಮೋರಿ ಅಳವಡಿಕೆ ಸೇರಿದಂತೆ ಒಟ್ಟಾರೆ 134 ಸಾರ್ವಜನಿಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.* ಅತೀ ಹೆಚ್ಚು ಮಾನವ ದಿನಗಳ ಸೃಜನೆ, ಉತ್ತಮ ನಿರ್ವಹಣೆ, ಒಟ್ಟಾರೆ 1 ಕೋಟಿ.ರೂ.ವೆಚ್ಚದ ಕಾಮಗಾರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದಿದೆ. ಇದರಲ್ಲಿ 80 ಲಕ್ಷ ರೂ.ಗೂ ಮಿಕ್ಕಿ ಕೂಲಿಯಾದರೆ, 18 ಲಕ್ಷ ರೂ. ಗೂ ಮಿಕ್ಕಿ ಹಣವನ್ನು ಸೊತ್ತುಗಳಿಗೆ ಬಳಸಲಾಗಿದೆ.