* ಅಕ್ಟೋಬರ್ 8 ರಂದು ವಿಜ್ಞಾನ ಭವನದಲ್ಲಿ ನಡೆದ 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ನಟ ಮತ್ತು ರಾಜಕಾರಣಿ ಮಿಥುನ್ ಚಕ್ರವರ್ತಿ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯು ದೇಶದ ಅತ್ಯುನ್ನತ ಚಲನಚಿತ್ರ ಗೌರವವಾಗಿದೆ.* ಮಿಥುನ್ ಚಕ್ರವರ್ತಿ ಅವರ ಸ್ಫೂರ್ತಿದಾಯಕ ಸಿನಿ ಪಯಣ ಮುಂದಿನ ಪೀಳಿಗೆಯನ್ನು ಪ್ರೇರೇಪಿಸಲಿದೆ ಎಂದು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆಯ ಜ್ಯೂರಿಗಳು ಅಭಿಪ್ರಾಯಪಟ್ಟಿದ್ದಾರೆ.* 74ರ ಹರೆಯದ ನಟ 1976ರಲ್ಲಿ ಸಿನಿಪಯಣ ಆರಂಭಿಸಿದರು. 'ಮೃಗಯಾ' ಮಿಥುನ್ ಚಕ್ರವರ್ತಿ ಅವರ ಚೊಚ್ಚಲ ಚಿತ್ರ. ಮೃಣಾಲ್ ಸೇನ್ ನಿರ್ದೇಶನದ ಸಿನಿಮಾ ಮೂಲಕ ನಟನಾ ವೃತ್ತಿಜೀವನ ಪ್ರಾರಂಭ ಮಾಡಿದರು. ಚೊಚ್ಚಲ ಚಿತ್ರದಲ್ಲೇ ಅಮೋಘ ಅಭಿನಯದಿಂದ ಗಮನ ಸೆಳೆದ ನಟ, ಉತ್ತಮ ನಟ ಪ್ರಶಸ್ತಿ ಪಡೆದರು. ಡಿಸ್ಕೋ ಡ್ಯಾನ್ಸರ್, ಕಸಂ ಪೈದಾ ಕರ್ನೆ ವಾಲೆ ಕಿ, ಕಮ್ಯಾಂಡೋ, ಓ ಮೈ ಗಾಡ್ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. * ಹಿಂದಿ ಮಾತ್ರವಲ್ಲದೇ ಬೆಂಗಾಳಿ ಚಿತ್ರಗಳಲ್ಲೂ ನಟಿಸಿದ್ದಾರೆ. ಇವರು ಪ್ರಮುಖ ಪಾತ್ರಗಳನ್ನು ಅಭಿನಯಿಸಿದ್ದ 19 ಸಿನಿಮಾಗಳು 1989ರಲ್ಲಿ ಒಂದೇ ವರ್ಷದ ತೆರೆಕಂಡಿದ್ದವು. ಹಾಗಾಗಿ, ಒಂದೇ ವರ್ಷ ಇಷ್ಟೊಂದು ಸಿನಿಮಾ ಬಿಡುಗಡೆಗೊಳಿಸಿದ ಕೀರ್ತಿ ಕೂಡಾ ಇವರಿಗೆ ಸಲ್ಲುತ್ತದೆ. ಹುಚ್ಚೆದ್ದು ಕುಣಿಯುವಂತಹ ಹಾಡುಗಳಲ್ಲಿಯೂ ನಟ ಬಣ್ಣ ಹಚ್ಚಿದ್ದಾರೆ. * ಮಿಥುನ್ ಅವರು 2014ರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಮೂಲಕ ರಾಜ್ಯಸಭಾ ಸದಸ್ಯರಾಗಿ ಸಂಸತ್ ಪ್ರವೇಶಿ ಮಾಡಿದ್ದರು. ಆದ್ರೆ 2 ವರ್ಷಗಳ ನಂತರ ರಾಜೀನಾಮೆ ಸಲ್ಲಿಸಿದ್ದರು. 2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದರು.* ಈ ಹಿಂದೆ ಅಮಿತಾಭ್ ಬಚ್ಚನ್, ವಹೀದಾ ರೆಹಮಾನ್, ರೇಖಾ, ಆಶಾ ಪರೇಖ್ ಮತ್ತು ರಜನಿಕಾಂತ್ ಈ ಪ್ರಶಸ್ತಿಗೆ ಭಾಜನರಾಗಿದ್ದರು. ಈ ವರ್ಷದ ಆರಂಭದಲ್ಲಿ, ಮಿಥುನ್ ಚಕ್ರವರ್ತಿ ಅವರನ್ನು ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಆಯ್ಕೆ ಮಾಡಲಾಗಿತ್ತು.* ಅತ್ಯುತ್ತಮ ಮನರಂಜನಾ ಚಿತ್ರ ‘ಕಾಂತಾರ’ ಮತ್ತು ಈ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ. ಅದಷ್ಟೇ ಅಲ್ಲ, ಅತ್ಯುತ್ತಮ ಪ್ರಾದೇಶಿಕ ಸಿನಿಮಾ, ಅತ್ಯುತ್ತಮ ಸಾಹಸ ನಿರ್ದೇಶನ ವಿಭಾಗದಲ್ಲಿ `ಕೆಜಿಎಫ್ 2’ಗೆ ರಾಷ್ಟ್ರ ಪ್ರಶಸ್ತಿ ದಕ್ಕಿದೆ. ಚಿತ್ರದ ನಿರ್ಮಾಣ ಸಂಸ್ಥೆಯ ರೂವಾರಿ ವಿಜಯ್ ಕಿರಗಂದೂರು ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ.