* ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಸೂಪರ್ 500 ಟೂರ್ನಿಯಾದ ಹಾಂಗ್ಕಾಂಗ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್(Hong Kong Open) ಟೂರ್ನಿಯಲ್ಲಿ ಎರಡು ಚಿನ್ನದ ಪದಕ ನಿರೀಕ್ಷೆಯಲ್ಲಿದ್ದ ಭಾರತೀಯರಿಗೆ ನಿರಾಸೆಯಾಗಿದೆ. ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಲಕ್ಷ್ಯ ಸೇನ್(Lakshya Sen) ಮತ್ತು ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ(Satwik-Chirag) ಸೋಲು ಕಂಡಿದ್ದಾರೆ.* ಎರಡು ವರ್ಷಗಳಲ್ಲಿ ಮೊದಲ ಬಾರಿ ಪ್ರಮುಖ ಟೂರ್ನಿಯೊಂದರ ಫೈನಲ್ ತಲುಪಿದ ಸೇನ್ 15-21, 12-21 ನೇರ ಗೇಮ್ ಅಂತರದಲ್ಲಿ ಎದುರಾಳಿ ಲಿ ಶಿ ಫೆನ್ ವಿರುದ್ಧ ಸೋತರು. ವಿಶ್ವದ 20ನೇ ಕ್ರಮಾಂಕದ ಸೇನ್, ನಾಲ್ಕನೇ ರ್ಯಾಂಕ್ನ ಆಟಗಾರನಿಗೆ ಹೆಚ್ಚಿನ ಪ್ರತಿರೋಧ ತೋರದೆ ನಿರೀಕ್ಷೆಗಿಂತ ಬೇಗನೆ ಸೋಲೊಪ್ಪಿಕೊಂಡರು. * 2021ರ ವಿಶ್ವ ಚಾಂಪಿಯನ್ಷಿಪ್ ಕಂಚು ವಿಜೇತ ಸೇನ್, 2023ರ ಜುಲೈನಲ್ಲಿ ಕೊನೆಯ ಬಾರಿಗೆ ಸೂಪರ್ 500 ಮಟ್ಟದ ಟೂರ್ನಿ ಗೆದ್ದಿದ್ದರು. ಕಳೆದ ನವೆಂಬರ್ನಲ್ಲಿ ಸೈಯದ್ ಮೋದಿ ಸೂಪರ್ 300 ಟೂರ್ನಿಯ ನಂತರ ಲಕ್ಷ್ಯ ಅವರಿಗೆ ಇದು ಮೊದಲ ಫೈನಲ್ ಆಗಿತ್ತು.* ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಸಾತ್ವಿಕ್–ಚಿರಾಗ್ ಜೋಡಿಯು ಫೈನಲ್ನಲ್ಲಿ 21-19, 14-21, 17-21ರಲ್ಲಿ ಮೂರು ಸೆಟ್ಗಳ ಹಣಾಹಣಿಯಲ್ಲಿ ಚೀನಾದ ಲಿಯಾಂಗ್ ವೀ ಕೆಂಗ್– ವಾಂಗ್ ಚಾಂಗ್ ಅವರಿಗೆ ಶರಣಾಯಿತು. ಮೊದಲ ಗೇಮ್ನಲ್ಲಿ ಮೇಲುಗೈ ಸಾಧಿಸಿದ್ದ ಭಾರತದ ಆಟಗಾರರು ನಂತರದ ಎರಡೂ ಗೇಮ್ಗಳಲ್ಲಿ ಲಯ ತಪ್ಪಿದರು. ಒಲಿಂಪಿಕ್ ಬೆಳ್ಳಿ ವಿಜೇತ ಜೋಡಿಯು 61 ನಿಮಿಷದಲ್ಲಿ ಈ ಪಂದ್ಯ ಗೆದ್ದುಕೊಂಡಿತು.* 16 ತಿಂಗಳ ಹಿಂದೆ ಥಾಯ್ಲೆಂಡ್ ಓಪನ್ ಗೆದ್ದ ನಂತರ ಸಾತ್ವಿಕ್ ಮತ್ತು ಚಿರಾಗ್ ಜೋಡಿಗೆ ಇದು ಮೊದಲ ಫೈನಲ್ ಆಗಿತ್ತು. ಸೂಪರ್ 500 ಮಟ್ಟದ ಟೂರ್ನಿಯಲ್ಲಿ ಐದನೇ ಬಾರಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದ ಭಾರತದ ಆಟಗಾರರಿಗೆ ಇದು ಮೊದಲ ಸೋಲಾಗಿದೆ. ಈ ಹಿಂದೆ ನಾಲ್ಕೂ ಫೈನಲ್ಗಳಲ್ಲಿ ಗೆದ್ದಿದ್ದರು. * ಈ ಋತುವಿನ ಆರು ಟೂರ್ನಿಗಳಲ್ಲಿ ಸೆಮಿಫೈನಲ್ ತಲುಪಿದ ಸಾತ್ವಿಕ್– ಚಿರಾಗ್ ಜೋಡಿಯು ಪ್ಯಾರಿಸ್ನಲ್ಲಿ ನಡೆದ ವಿಶ್ವ ಚಾಂಪಿಯನ್ಷಿಪ್ನಲ್ಲಿ ಇದೇ ಚೀನಿ ಆಟಗಾರರನ್ನು ಮೂರು ಗೇಮ್ಗಳ ಹಣಾಹಣಿಯಲ್ಲಿ ಮಣಿಸಿತ್ತು. ಎರಡು ವಾರಗಳ ಬಳಿಕ ಅದೇ ಜೋಡಿಯ ವಿರುದ್ಧ ಸೋಲೊಪ್ಪಿಕೊಂಡಿತು.