➤ ಪಣಜಿ: ಪರಿಸರ ಸಂರಕ್ಷಣೆ ಮತ್ತು ಜೀವವೈವಿಧ್ಯದ ದಾಖಲೀಕರಣದಲ್ಲಿ ಗೋವಾ ರಾಜ್ಯವು ಹೊಸ ಇತಿಹಾಸ ಬರೆದಿದೆ. ಫೆಬ್ರವರಿ 7 ರಂದು ಗೋವಾದ ಒಂಬತ್ತನೇ ಪಕ್ಷಿ ಉತ್ಸವದ ಸಂದರ್ಭದಲ್ಲಿ'ಬರ್ಡ್ ಅಟ್ಲಾಸ್ ಆಫ್ ಗೋವಾ' (Bird Atlas of Goa) ಅನ್ನು ಬಿಡುಗಡೆ ಮಾಡಲಾಗಿದ್ದು, ಈ ಮೂಲಕ ಸಮಗ್ರ ಪಕ್ಷಿ ಅಟ್ಲಾಸ್ ಹೊಂದಿದ ಭಾರತದ ಎರಡನೇ ರಾಜ್ಯ ಎಂಬ ಹೆಗ್ಗಳಿಕೆಗೆ ಗೋವಾ ಪಾತ್ರವಾಗಿದೆ. ಮೊದಲ ರಾಜ್ಯ: ಪಕ್ಷಿ ಅಟ್ಲಾಸ್ ಪ್ರಕಟಿಸಿದ ಭಾರತದ ಮೊದಲ ರಾಜ್ಯ ಕೇರಳ➤ ಪಕ್ಷಿ ಅಟ್ಲಾಸ್ ಎಂದರೆ ಒಂದು ನಿರ್ದಿಷ್ಟ ಪ್ರದೇಶದಲ್ಲಿನ ವಿವಿಧ ಪಕ್ಷಿ ಪ್ರಭೇದಗಳ ಹರಡುವಿಕೆ ಮತ್ತು ಅವುಗಳ ಸಂಖ್ಯೆಯನ್ನು ವೈಜ್ಞಾನಿಕವಾಗಿ ಮ್ಯಾಪಿಂಗ್ ಮಾಡುವ ಪ್ರಕ್ರಿಯೆ. ಇದು ಪರಿಸರ ಬದಲಾವಣೆ ಮತ್ತು ಪಕ್ಷಿಗಳ ವಾಸಸ್ಥಾನದ ಮೇಲಾಗುವ ಪರಿಣಾಮಗಳನ್ನು ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಮತ್ತು ಪರಿಸರ ಪ್ರೇಮಿಗಳಿಗೆ ದಿಕ್ಸೂಚಿಯಂತೆ ಕೆಲಸ ಮಾಡುತ್ತದೆ.➤ 9ನೇ ಗೋವಾ ಪಕ್ಷಿ ಹಬ್ಬ: ಗೋವಾದ ವಾಲ್ಪೋಯಿಯಲ್ಲಿ ನಡೆದ 9ನೇ ಪಕ್ಷಿ ಹಬ್ಬವು ಪರಿಸರ ಸಂರಕ್ಷಣೆ ಮತ್ತು ಸ್ಥಳೀಯ ಸಂಸ್ಕೃತಿಯ ಸಂಗಮವಾಗಿತ್ತು. "ಮೆಜೆಸ್ಟಿಕ್ ಮಹದಾಯಿ" ಎಂಬ ಧ್ಯೇಯವಾಕ್ಯದಡಿ ನಡೆದ ಈ ಕಾರ್ಯಕ್ರಮದಲ್ಲಿ, ಮಹದಾಯಿ ನದಿ ಪಾತ್ರದ ಅಪರೂಪದ ಜೀವವೈವಿಧ್ಯವನ್ನು ಅನಾವರಣಗೊಳಿಸಲಾಯಿತು. ಮುಖ್ಯ ಕಾರ್ಯದರ್ಶಿ ಸಿ. ಕಂಡವೇಲು ಅವರಿಂದ ಉದ್ಘಾಟಿಸಲ್ಪಟ್ಟ ಈ ಹಬ್ಬದ ಪ್ರಮುಖ ಆಕರ್ಷಣೆಯೆಂದರೆ “Birds of Goa: Konkani Nomenclature – Olakh Suknayanchi” ಎಂಬ ಕೃತಿಯ ಬಿಡುಗಡೆ. ಸ್ಥಳೀಯ ಕೊಂಕಣಿ ಭಾಷೆಯಲ್ಲಿ ಪಕ್ಷಿಗಳ ಹೆಸರನ್ನು ದಾಖಲಿಸಿರುವ ಈ ಪ್ರಯತ್ನವು, ಜನಸಾಮಾನ್ಯರನ್ನು ಪರಿಸರ ಸಂರಕ್ಷಣಾ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಮಹತ್ವದ ಹೆಜ್ಜೆಯಾಗಿದೆ.➤ ವನ್ಯಜೀವಿ ರಕ್ಷಣೆಗೆ ಹೊಸ ಒಪ್ಪಂದ (MoU): ಕಾರ್ಯಕ್ರಮದ ವೇಳೆ ಗೋವಾ ಅರಣ್ಯ ಇಲಾಖೆಯು 'ResQ ಚಾರಿಟಬಲ್ ಟ್ರಸ್ಟ್' ನೊಂದಿಗೆ ತಿಳುವಳಿಕಾ ಒಪ್ಪಂದಕ್ಕೆ (MoU) ಸಹಿ ಹಾಕಿತು. ಇದು ರಾಜ್ಯದಲ್ಲಿ ವನ್ಯಜೀವಿಗಳ ರಕ್ಷಣೆ ಮತ್ತು ಪುನರ್ವಸತಿ ಕಾರ್ಯಗಳನ್ನು ಮತ್ತಷ್ಟು ಚುರುಕುಗೊಳಿಸಲು ಸಹಕಾರಿಯಾಗಲಿದೆ.