* ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾದ ಅಧ್ಯಕ್ಷ ಪ್ರಭಾವೊ ಸುಬಿಯಾಂಟೊ ಪಾಲ್ಗೊಳ್ಳಲಿದ್ದಾರೆ.* ಕೇಂದ್ರ ಸರ್ಕಾರ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲಿರುವ ಗಣ್ಯರ ಪಟ್ಟಿಯನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದ್ದು, ಮೂಲಗಳ ಪ್ರಕಾರ ಇಂಡೋನೇಷ್ಯಾದ ಅಧ್ಯಕ್ಷರಾಗಿ 2024 ಅಕ್ಟೋಬರ್ ನಲ್ಲಿ ಅಧಿಕಾರ ಸ್ವೀಕರಿಸಿದ 73 ವರ್ಷದ ಮಾಜಿ ಸೇನಾಧಿಕಾರಿ ಸುಬಿಯಾಂಟೊ ಪಾಲ್ಗೊಳ್ಳಲಿದ್ದಾರೆ.* ಭಾರತ ಭೇಟಿ ಬಳಿಕ ಅವರು ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲು ಯೋಜಿಸಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದ್ದವು.* ಇಂಡೋನೇಷ್ಯಾ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪ್ರಮುಖ ವಿಚಾರಗಳ ಕುರಿತು ಮಾತುಕತೆ ನಡೆಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.* ಪ್ರತಿ ವರ್ಷ ಭಾರತವು ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ವಿಶ್ವ ನಾಯಕರನ್ನು ಆಹ್ವಾನಿಸುತ್ತದೆ. ಕಳೆದ ವರ್ಷ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮುಖ್ಯ ಅತಿಥಿಯಾಗಿದ್ದರು.2023ರಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್ -ಸಿಸಿ ಅವರು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. COVID-19 ಸಾಂಕ್ರಾಮಿಕದ ದೃಷ್ಟಿಯಿಂದ 2021 ಮತ್ತು 2022 ರಲ್ಲಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಯಾರೂ ಪಾಲ್ಗೊಂಡಿರಲಿಲ್ಲ.