* ಆರೋಗ್ಯ ಇಲಾಖೆಯು ಘೋಷಿತ ಕಾಯಿಲೆಗಳ ಪಟ್ಟಿಗೆ ಹಾವು ಕಡಿತವನ್ನೂ ಸೇರ್ಪಡೆ ಮಾಡಿ ಆದೇಶ ಹೊರಡಿಸಿದೆ. ಭಾರತದಲ್ಲಿ ಉಂಟಾಗುವ ಹಾವು ಕಡಿತವನ್ನು ವಿಶ್ವ ಆರೋಗ್ಯ ಸಂಸ್ಥೆಯು 'ಉಷ್ಣವಲಯದ ನಿರ್ಲಕ್ಷಿತ ರೋಗಗಳು' ಎಂದು ವರ್ಗೀಕರಿಸಿದೆ. ಹೀಗಾಗಿ, ಕರ್ನಾಟಕದಲ್ಲಿ 2023–24ರ ಸಾಲಿನಲ್ಲಿ ಹಾವು ಕಡಿತ ತಡೆಗಟ್ಟುವ ಕಾರ್ಯಕ್ರಮ ಆರಂಭಿಸಲಾಗಿದೆ.*  ಆರೋಗ್ಯ ಇಲಾಖೆಯು ಫೆಬ್ರವರಿ 12 ರಂದು ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, “ಎಲ್ಲ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳು ಹಾವು ಕಡಿತದ ಎಲ್ಲ ಪ್ರಕರಣಗಳನ್ನು ಅಂದರೆ ಒಳರೋಗಿಗಳು, ಹೊರರೋಗಿಗಳು ಮತ್ತು ಸಾವಿನ ಪ್ರಕರಣಗಳೇ ಆಗಿರಲಿ ಸಮಗ್ರ ಆರೋಗ್ಯ ಮಾಹಿತಿ ವೇದಿಕೆಯಲ್ಲಿ ನೋಂದಾಯಿಸಬೇಕು” ಎಂದು ನಿರ್ದೇಶಿಸಿದೆ.* ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿ ಮತ್ತು ಮಾಹಿತಿಯ ಪ್ರಕಾರ, 2023ರಲ್ಲಿ ಕರ್ನಾಟಕದಲ್ಲಿ 6,595 ಜನರಿಗೆ ಹಾವುಗಳು ಕಡದಿವೆ. ಇದರಲ್ಲಿ 19 ಜನರು ಮೃತಪಟ್ಟಿದ್ದಾರೆ. ಈ ವರ್ಷ, ಅಧಿಕೃತ ಅಂಕಿಅಂಶಗಳ ಪ್ರಕಾರ, ಇದುವರೆಗೆ 543 ಜನರಿಗೆ ಹಾವುಗಳು ಕಡಿದಿವೆ.