* ತೆಲಂಗಾಣದಲ್ಲಿ ಎ. ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಎಸ್ಸಿ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಸೋಮವಾರ(ಏಪ್ರಿಲ್ 14) ಆದೇಶ ನೀಡಿದೆ.* ‘ಎಸ್ಸಿ ಒಳಮೀಸಲಾತಿಯನ್ನು ಅನುಷ್ಠಾನಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ತೆಲಂಗಾಣ ಪಾತ್ರವಾಗಿದೆ’ ಎಂದು ನೀರಾವರಿ ಸಚಿವ ಎನ್. ಉತ್ತಮ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.* ಹಿಂದುಳಿದ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುವ ಕುರಿತಂತೆ ರಾಜ್ಯ ಸರ್ಕಾರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಮೀಮ್ ಅಖ್ತರ್ ನೇತೃತ್ವದ ಆಯೋಗವನ್ನು ರಚಿಸಿತ್ತು.* ಸಮಿತಿಯ ಪ್ರಕಾರ, ಎಸ್ಸಿ ಪಟ್ಟಿಯಲ್ಲಿ ಇರುವ 59 ಉಪಜಾತಿಗಳನ್ನು ಜನಸಂಖ್ಯೆ ಮತ್ತು ಹಿಂದುಳಿದ ಸ್ಥಿತಿಯ ಆಧಾರದ ಮೇಲೆ ಮೂರಾಗಿ ವಿಭಾಗಿಸಿ ಮೀಸಲಾತಿ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ.* ರಾಜ್ಯಪಾಲರು ‘ತೆಲಂಗಾಣ ಪರಿಶಿಷ್ಟ ಜಾತಿಗಳ (ಮೀಸಲಾತಿ ತರ್ಕಬದ್ಧಗೊಳಿಸುವಿಕೆ) ಕಾಯ್ದೆ–2025’ಕ್ಕೆ ಏಪ್ರಿಲ್ 8ರಂದು ಅನುಮೋದನೆ ನೀಡಿದ್ದಾರೆ; ಇದಕ್ಕೆ ಸಂಬಂಧಪಟ್ಟ ಗೆಜೆಟ್ ಅಧಿಸೂಚನೆ ಏಪ್ರಿಲ್ 14ರಂದು ಹೊರಬಿದ್ದಿದೆ ಎಂದು ಸರ್ಕಾರ ತಿಳಿಸಿದೆ.* ಎಸ್ಸಿ ಒಳಮೀಸಲಾತಿಗೆ ಸಂಬಂಧಿಸಿದ ಸಂಪುಟ ಉಪಸಮಿತಿಗೆ ನಾಯಕರಾಗಿದ್ದ ಸಚಿವ ರೆಡ್ಡಿ, ಸೋಮವಾರ ಸುದ್ದಿಗೋಷ್ಠಿಯಲ್ಲಿ, ‘ಆದೇಶದ ಪ್ರಥಮ ಪ್ರತಿಯನ್ನು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರಿಗೆ ಹಸ್ತಾಂತರಿಸಲಾಗಿದೆ’ ಎಂದು ಹೇಳಿದರು.* ‘ಏಪ್ರಿಲ್ 14ರಿಂದ ರಾಜ್ಯದಲ್ಲಿ ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಎಸ್ಸಿ ಒಳಮೀಸಲಾತಿ ಜಾರಿಗೊಳಿಸಲಾಗಿದೆ. ಈ ಬಗ್ಗೆ ಸರ್ಕಾರ ಅಧಿಕೃತ ಆದೇಶ ನೀಡಿದೆ’ ಎಂದು ತಿಳಿಸಿದರು.* ‘ತೆಲಂಗಾಣ ಪರಿಶಿಷ್ಟ ಜಾತಿಗಳ (ಮೀಸಲಾತಿ ತರ್ಕಬದ್ಧಗೊಳಿಸುವಿಕೆ) ಮಸೂದೆ–2025’ನ್ನು ತೆಲಂಗಾಣ ವಿಧಾನಸಭೆಯಲ್ಲಿ ಕಳೆದ ತಿಂಗಳು ಅಂಗೀಕರಿಸಿತು. ಸುಪ್ರೀಂ ಕೋರ್ಟ್ ಕೂಡ ಕಳೆದ ವರ್ಷ ಎಸ್ಸಿ ಒಳಮೀಸಲಾತಿಗೆ ಬೆಂಬಲ ನೀಡಿದ ತೀರ್ಪು ನೀಡಿತ್ತು.