Job Description: ➤ ಭಾರತದ ಶಿಕ್ಷಣ ವ್ಯವಸ್ಥೆಯು ಕೇವಲ ಮೂಲಸೌಕರ್ಯದ ಕೊರತೆಯಿಂದ ಮಾತ್ರವಲ್ಲದೆ, ಗುಣಮಟ್ಟದ ಬೋಧನೆಯ ಸವಾಲುಗಳಿಂದಲೂ ನಲುಗುತ್ತಿದೆ ಎಂದು ನೀತಿ ಆಯೋಗದ (NITI Aayog) ಇತ್ತೀಚಿನ ವರದಿ ಎಚ್ಚರಿಸಿದೆ. 'ಭಾರತದಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆ: ಗುಣಮಟ್ಟ ವರ್ಧನೆಗಾಗಿ ವಿಶ್ಲೇಷಣೆ ಮತ್ತು ಮಾರ್ಗಸೂಚಿ' ಎಂಬ ಶೀರ್ಷಿಕೆಯಡಿ ಬಿಡುಗಡೆಯಾದ ಈ ವರದಿಯು ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳ ಶಿಕ್ಷಣದ ಆತಂಕಕಾರಿ ಚಿತ್ರಣವನ್ನು ಬಿಚ್ಚಿಟ್ಟಿದೆ.➤ ಕರ್ನಾಟಕದಲ್ಲಿ ಪ್ರೌಢಶಿಕ್ಷಣಕ್ಕೆ ಕುತ್ತು: ವರದಿಯ ಪ್ರಕಾರ, ರಾಷ್ಟ್ರೀಯ ಮಟ್ಟದಲ್ಲಿ ಪ್ರೌಢಶಾಲಾ ಹಂತದಲ್ಲಿ ಶಾಲೆಯನ್ನು ಅರ್ಧಕ್ಕೆ ಬಿಡುವವರ (Dropout Rate) ಪ್ರಮಾಣ ಶೇ. 11.5 ರಷ್ಟಿದೆ. ಆದರೆ, ಕರ್ನಾಟಕದಲ್ಲಿ ಈ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚಿದ್ದು, ಸುಮಾರು ಶೇ. 18.3ರಷ್ಟು ಮಕ್ಕಳು ಪ್ರೌಢಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲೂ ಈ ಸಂಖ್ಯೆ ಏರಿಕೆಯಾಗಿರುವುದು ಕಳವಳಕಾರಿ ಸಂಗತಿ.➤ ಮೂಲಸೌಕರ್ಯದ ಕೊರತೆ: ಕತ್ತಲಲ್ಲಿ ಲಕ್ಷಾಂತರ ಶಾಲೆಗಳು: ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲೂ ದೇಶದ ಶಾಲೆಗಳು ಕನಿಷ್ಠ ಸೌಲಭ್ಯಗಳಿಗಾಗಿ ಪರದಾಡುತ್ತಿವೆ:- ವಿದ್ಯುತ್ ಸಂಪರ್ಕ: ಕಳೆದ ದಶಕದಲ್ಲಿ ಸುಧಾರಣೆ ಕಂಡುಬಂದಿದ್ದರೂ, ಇನ್ನೂ 1.19 ಲಕ್ಷ ಶಾಲೆಗಳು ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲಿವೆ.- ನೀರು ಮತ್ತು ನೈರ್ಮಲ್ಯ: 14,505 ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ. 59,829 ಶಾಲೆಗಳಲ್ಲಿ ಕೈ ತೊಳೆಯಲು ನೀರಿನ ವ್ಯವಸ್ಥೆಯಿಲ್ಲ.- ಹೆಣ್ಣುಮಕ್ಕಳ ಶೌಚಾಲಯ: ಸುಮಾರು 98,592 ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆಗಳಿಲ್ಲದಿರುವುದು ಆತಂಕಕಾರಿ.- ವಿಜ್ಞಾನ ಪ್ರಯೋಗಾಲಯ: ಕೇವಲ ಶೇ. 51.7ರಷ್ಟು ಸರಕಾರಿ ಪ್ರೌಢಶಾಲೆಗಳಲ್ಲಿ ಮಾತ್ರ ವಿಜ್ಞಾನ ಪ್ರಯೋಗಾಲಯಗಳಿವೆ.➤ ಶಿಕ್ಷಕರ ಕೊರತೆ ಮತ್ತು ಗುಣಮಟ್ಟದ ಸವಾಲು: ದೇಶದ ಶಿಕ್ಷಣ ವ್ಯವಸ್ಥೆಗೆ ಶಿಕ್ಷಕರ ಕೊರತೆಯೇ ದೊಡ್ಡ ಶಾಪವಾಗಿದೆ:- ಏಕ ಶಿಕ್ಷಕ ಶಾಲೆ: ದೇಶಾದ್ಯಂತ 1,04,125 ಶಾಲೆಗಳು ಕೇವಲ ಒಬ್ಬನೇ ಶಿಕ್ಷಕನಿಂದ ನಡೆಯುತ್ತಿವೆ. ಇವುಗಳಲ್ಲಿ ಶೇ. 99ರಷ್ಟು ಶಾಲೆಗಳು ಗ್ರಾಮೀಣ ಭಾಗದಲ್ಲಿವೆ.- ವಿದ್ಯಾರ್ಥಿ-ಶಿಕ್ಷಕರ ಅನುಪಾತ: ಜಾರ್ಖಂಡ್‌ನಲ್ಲಿ ಒಬ್ಬ ಶಿಕ್ಷಕನಿಗೆ 47 ವಿದ್ಯಾರ್ಥಿಗಳಿದ್ದಾರೆ (47:1).- ಬೋಧನಾ ಸಾಮರ್ಥ್ಯ: ಕೇವಲ ಶೇ. 10ರಿಂದ 15ರಷ್ಟು ಶಿಕ್ಷಕರು ಮಾತ್ರ ತಾವು ಬೋಧಿಸುವ ವಿಷಯಗಳಲ್ಲಿ ಶೇ. 60ಕ್ಕಿಂತ ಹೆಚ್ಚು ಅಂಕ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ವರದಿ ಬೆಟ್ಟು ಮಾಡಿದೆ.➤ ಶೂನ್ಯ ವಿದ್ಯಾರ್ಥಿ ಶಾಲೆಗಳು: ಒಂದೆಡೆ ಮಕ್ಕಳ ದಾಖಲಾತಿ ಹೆಚ್ಚಿಸಲು ಪ್ರಯತ್ನಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ದೇಶದಲ್ಲಿ 7,993 ಶಾಲೆಗಳು ಒಬ್ಬನೇ ಒಬ್ಬ ವಿದ್ಯಾರ್ಥಿ ಇಲ್ಲದೆ ಸೊರಗುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಇಂತಹ ಶಾಲೆಗಳ ಸಂಖ್ಯೆ (3,812) ಅತ್ಯಧಿಕವಾಗಿದೆ.➤ ನೀತಿ ಆಯೋಗದ ಪ್ರಮುಖ 13 ಶಿಫಾರಸುಗಳು: ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಆಯೋಗವು ಕೆಲವು ಮಹತ್ವದ ಸಲಹೆಗಳನ್ನು ನೀಡಿದೆ:- ಶಿಕ್ಷಕರಿಗೆ ಕಾಲಕಾಲಕ್ಕೆ ಉನ್ನತ ಮಟ್ಟದ ಗುಣಮಟ್ಟದ ತರಬೇತಿ.- ಶಾಲಾ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವುದು.- ಪಠ್ಯಕ್ರಮದಲ್ಲಿ ವೃತ್ತಿಪರ ಶಿಕ್ಷಣವನ್ನು (Vocational Education) ಅಳವಡಿಸುವುದು.- ಆಧುನಿಕ ಯುಗಕ್ಕೆ ತಕ್ಕಂತೆ ಬೋಧನೆಯಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆ.