* ಉತ್ತರ ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯವಾಗಿರುವ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪ್ರೊ.ಎ.ಎಂ.ಖಾನ್ ನೂತನ ಕುಲಪತಿಯಾಗಿ ನೇಮಕಗೊಂಡಿದ್ದಾರೆ.* ಮೂಲತಃ ಧಾರವಾಡದವರೇ ಆಗಿರುವ ಪ್ರೊ.ಖಾನ್ ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 22 ವರ್ಷಗಳ ಹಿಂದೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಪ್ರೊ.ಪಠಾನ್ ಅವರು ಕವಿವಿ ಕುಲಪತಿಯಾಗಿದ್ದರು.* ಎಂಎಸ್ಸಿ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಉನ್ನತ ವ್ಯಾಸಂಗ ಮಾಡಿರುವ ಡಾ.ಖಾನ್ ಕಳೆದ 26ವರ್ಷಗಳಿಂದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಅನೇಕ ವಿಚಾರ ಸಂಕಿರಣಗಳಲ್ಲಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ ಸೈ ಎನಿಸಿಕೊಂಡಿರುವ ಅವರು ಇಸ್ರೋದ ಜೊತೆಗೂ ಸಂಶೋಧನಾ ವಿಚಾರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.* ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯಕ್ಕೆ ಡಾ.ಶಿವಾನಂದ ಕೆಳಗಿನಮನಿ ಕುಲಪತಿಯಾಗಿದ್ದಾರೆ. ಇವರು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿದ್ದರು.* ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆ ಇದೇ ವಿವಿಯ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಅವರನ್ನು ನೇಮಿಸಲಾಗಿದೆ.