* ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ನಡೆದ ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆ ಸಂರಕ್ಷಣೆಗೆ ಸಂಬಂಧಿಸಿದ ಮಹತ್ವದ ಅಂತಾರಾಷ್ಟ್ರೀಯ ಅಧಿವೇಶನ ಶನಿವಾರ(dec.13) ಯಶಸ್ವಿಯಾಗಿ ಸಮಾರೋಪಗೊಂಡಿತು. ಸತತ ಒಂದು ವಾರ ನಡೆದ ಈ ಸಭೆಯಲ್ಲಿ ಜಗತ್ತಿನ ವಿವಿಧ ದೇಶಗಳಿಂದ ಬಂದ 1,400ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ, ಜಾಗತಿಕ ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಪರಂಪರೆಯ ಸಂರಕ್ಷಣೆಯ ಕುರಿತು ಚರ್ಚಿಸಿದರು.* ಈ ಅಧಿವೇಶನದಲ್ಲಿ ಒಟ್ಟು67 ಅಮೂರ್ತ ಸಾಂಸ್ಕೃತಿಕ ಪರಂಪರೆ ಅಂಶಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲಾಗಿದ್ದು, ಭಾರತದ ದೀಪಾವಳಿ ಆಚರಣೆ, ಪರ್ಷಿಯನ್ ವಾಸ್ತುಶಿಲ್ಪದಲ್ಲಿನ ಕನ್ನಡಿ ಕಲೆ, ಇಟಲಿಯ ಆಹಾರ ಪರಂಪರೆ ಸೇರಿದಂತೆ ಹಲವು ದೇಶಗಳ ವಿಶಿಷ್ಟ ಸಂಸ್ಕೃತಿಗಳು ಇದರಲ್ಲಿ ಸ್ಥಾನ ಪಡೆದಿವೆ. ಈ ವರ್ಷದ ಸೇರ್ಪಡೆಗಳೊಂದಿಗೆ, ಈಗ ಯುನೆಸ್ಕೋ ಅಮೂರ್ತ ಪರಂಪರೆ ಪಟ್ಟಿಯಲ್ಲಿ 157 ದೇಶಗಳ 849 ಸಾಂಸ್ಕೃತಿಕ ಅಂಶಗಳು ಸೇರಿವೆ.* ಇದು ಭಾರತ ಮೊದಲ ಬಾರಿಗೆ ಈ ಪ್ರತಿಷ್ಠಿತ ಅಧಿವೇಶನದ ಆತಿಥ್ಯ ವಹಿಸಿದ್ದ ಸಂದರ್ಭವಾಗಿದ್ದು, ಮೊಘಲ್ ಕಾಲದ ಕೆಂಪುಕೋಟೆಯಂತಹ ಐತಿಹಾಸಿಕ ಸ್ಮಾರಕವು ಸಭೆಗೆ ಅದ್ಭುತ ಹಿನ್ನೆಲೆಯನ್ನು ನೀಡಿತು. “ಭಾರತದಲ್ಲಿನ ಪ್ರತಿಕ್ಷಣವನ್ನು ನಾವು ಆನಂದಿಸಿದ್ದೇವೆ” ಎಂದು ಯುನೆಸ್ಕೋದ ಅಮೂರ್ತ ಪರಂಪರೆ ಸಂರಕ್ಷಣಾ ಒಪ್ಪಂದದ ಕಾರ್ಯದರ್ಶಿ ಫುಮಿಕೊ ಓಹಿನಾಟಾ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.* ಸಭೆಯ ಅಂತ್ಯದಲ್ಲಿ ಮುಂದಿನ ವರ್ಷದ ಅಧಿವೇಶನದ ಆತಿಥ್ಯವನ್ನು ಚೀನಾ ವಹಿಸಲಿದೆ ಎಂದು ಘೋಷಿಸಲಾಯಿತು. 2026ರ ಡಿಸೆಂಬರ್ನಲ್ಲಿ ಚೀನಾದ ಶಿಯಾಮೆನ್ ನಗರದಲ್ಲಿ ಯುನೆಸ್ಕೋದ ಮುಂದಿನ ಅಮೂರ್ತ ಸಾಂಸ್ಕೃತಿಕ ಪರಂಪರೆ ಅಧಿವೇಶನ ನಡೆಯಲಿದೆ.