* ಪ್ರತಿ ವರ್ಷ ಡಿಸೆಂಬರ್ 16ರಂದು ಆಚರಿಸಲಾಗುವ ವಿಜಯ್ ದಿವಸ್, 1971ರ ಭಾರತ–ಪಾಕಿಸ್ತಾನ ಯುದ್ಧದಲ್ಲಿ ಭಾರತೀಯ ಸೇನೆಯು ಸಾಧಿಸಿದ ಐತಿಹಾಸಿಕ ವಿಜಯವನ್ನು ಸ್ಮರಿಸುವ ಮಹತ್ವದ ದಿನವಾಗಿದೆ. ಕೇವಲ 13 ದಿನಗಳ ಕಾಲ ನಡೆದ ಈ ಯುದ್ಧದಲ್ಲಿ, ಭಾರತೀಯ ಸೇನೆಯ ಶೌರ್ಯ, ತಂತ್ರಜ್ಞಾನ ಮತ್ತು ಧೈರ್ಯದ ಮುಂದೆ ಪಾಕಿಸ್ತಾನಿ ಸೇನೆ ಮಣಿದು, ಢಾಕಾದಲ್ಲಿ 93,000 ಪಾಕಿಸ್ತಾನಿ ಸೈನಿಕರು ಶರಣಾದರು. ಇದರೊಂದಿಗೆ ಪೂರ್ವ ಪಾಕಿಸ್ತಾನವು ಪಾಕಿಸ್ತಾನದಿಂದ ವಿಭಜನೆಗೊಂಡು ಸ್ವತಂತ್ರ ರಾಷ್ಟ್ರವಾದ ಬಾಂಗ್ಲಾದೇಶವಾಗಿ ಉದಯವಾಯಿತು.* ಪಶ್ಚಿಮ ಪಾಕಿಸ್ತಾನದ ದೌರ್ಜನ್ಯ, ಭಾಷಾ ದಮನ ಮತ್ತು ರಾಜಕೀಯ ಅನ್ಯಾಯಗಳ ವಿರುದ್ಧ ಪೂರ್ವ ಪಾಕಿಸ್ತಾನದ ಜನರು ದೀರ್ಘಕಾಲ ಹೋರಾಟ ನಡೆಸಿದರು. ಈ ಸ್ವಾತಂತ್ರ್ಯ ಹೋರಾಟಕ್ಕೆ ಭಾರತ ಮಾನವೀಯ ಹಾಗೂ ಸೈನಿಕ ಬೆಂಬಲ ನೀಡಿತು. ಮುಕ್ತಿ ಬಾಹಿನಿಯ ಗೆರಿಲ್ಲಾ ಯೋಧರು ಭಾರತೀಯ ಸೇನೆಯೊಂದಿಗೆ ಕೈಜೋಡಿಸಿ ಪಾಕಿಸ್ತಾನಿ ಸೇನೆಯನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಯುದ್ಧದ ಸಮಯದಲ್ಲಿ ಜನರಲ್ ಸ್ಯಾಮ್ ಮಾಣೆಕ್‌ಶಾ ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದರು.* ಈ ವಿಜಯದಲ್ಲಿ ಸುಮಾರು 3,900 ಭಾರತೀಯ ಸೈನಿಕರು ಹುತಾತ್ಮರಾದರೆ, ಸಾವಿರಾರು ಯೋಧರು ಗಾಯಗೊಂಡರು. ಅವರ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಯನ್ನು ಸ್ಮರಿಸುವುದೇ ವಿಜಯ್ ದಿವಸ್‌ನ ಮೂಲ ಉದ್ದೇಶ. ಈ ದಿನದಂದು ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಮಾಜಿ ಸೈನಿಕರು, ಹುತಾತ್ಮರ ಕುಟುಂಬಗಳು ಮತ್ತು ಸಶಸ್ತ್ರ ಪಡೆಗಳ ಸೇವೆಯನ್ನು ಗೌರವಿಸಲಾಗುತ್ತದೆ. ಯುವ ಪೀಳಿಗೆಗೆ ದೇಶರಕ್ಷಣೆ ಮತ್ತು ರಾಷ್ಟ್ರಸೇವೆಯ ಮಹತ್ವವನ್ನು ಸಾರುವ ದೇಶಭಕ್ತಿಯ ಕಾರ್ಯಕ್ರಮಗಳೂ ನಡೆಯುತ್ತವೆ.* ವಿಜಯ್ ದಿವಸ್ ಮುನ್ನಾದಿನದಂದು ನವದೆಹಲಿಯ ಸೇನಾ ಭವನದಲ್ಲಿ ‘ವಿಜಯ್ ದಿವಸ್ ಅಟ್ ಹೋಮ್’ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಸ್ವಾವಲಂಬನೆ, ಆಧುನಿಕೀಕರಣ ಮತ್ತು ದೇಶೀಯ ತಂತ್ರಜ್ಞಾನಗಳ ಸಾಮರ್ಥ್ಯವನ್ನು ಪ್ರದರ್ಶಿಸಲಾಯಿತು. ವಿಜಯ್ ದಿವಸ್ ಭಾರತದ ಸೈನಿಕ ಶಕ್ತಿ, ರಾಷ್ಟ್ರೀಯ ಏಕತೆ ಮತ್ತು ಹೆಮ್ಮೆಯ ಪ್ರತೀಕವಾಗಿ ಸದಾ ಉಳಿದಿದೆ.