* ಪ್ರತಿ ವರ್ಷ ಡಿಸೆಂಬರ್ 1ನ್ನು ಭಾರತದಲ್ಲಿ ಗಡಿ ಭದ್ರತಾ ಪಡೆಯ (ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಬಿಎಸ್ಎಫ್) ದಿನಾಚರಣೆ ಎಂದು ಆಚರಿಸಲಾಗುತ್ತದೆ. ಭಾರತದ ಗಡಿಗಳಲ್ಲಿ ದೇಶ ರಕ್ಷಣೆಗಾಗಿ ನಿರಂತರವಾಗಿ ಕಾರ್ಯಾಚರಿಸುವ ವೀರ ಪುರುಷ ಮತ್ತು ಮಹಿಳಾ ಯೋಧರನ್ನು ಗೌರವಿಸುವ ಸಲುವಾಗಿ ಈ ಬಿಎಸ್ಎಫ್ ದಿನವನ್ನು ಜಾರಿಗೆ ತರಲಾಯಿತು. * 1965ರಲ್ಲಿ ಬಿಎಸ್ಎಫ್ ಸ್ಥಾಪನೆಯಾದ ಬಳಿಕ ಬಿಎಸ್ಎಫ್ ಜಗತ್ತಿನ ಅತಿದೊಡ್ಡ ಗಡಿ ಭದ್ರತಾ ಪಡೆಯಾಗಿ ಹೊರಹೊಮ್ಮಿದೆ. ಇಂದು ಬಿಎಸ್ಎಫ್ 2.65 ಲಕ್ಷ ಯೋಧರನ್ನು ಹೊಂದಿದೆ. ಬಿಎಸ್ಎಫ್ ದಿನಾಚರಣೆ ದೇಶದ ಭಧ್ರತೆಯಲ್ಲಿ ಬಿಎಸ್ಎಫ್ ಪಾತ್ರ, ಅದರ ಇತ್ತೀಚಿನ ಬೆಳವಣಿಗೆಗಳು, ದೇಶದ ಭದ್ರತೆಯ ಕುರಿತು ಬಿಎಸ್ಎಫ್ ಯೋಧರ ಬದ್ಧತೆಗಳನ್ನು ಜನತೆಗೆ ಸಾರುತ್ತದೆ.* ವಿವಿಧ ಪ್ರದೇಶಗಳಲ್ಲಿ ತಲೆದೋರಿದ ಸಶಸ್ತ್ರ ದಾಳಿಗಳನ್ನು ಅದರಲ್ಲೂ 1965ರಲ್ಲಿ ಕಛ್ನಲ್ಲಿರುವ ಸರ್ದಾರ್ ಪೋಸ್ಟ್, ಛಾರ್ ಬೆಟ್, ಹಾಗೂ ಬೇರಿಯಾ ಬೆಟ್ಗಳಲ್ಲಿ ಉಂಟಾದ ಸಶಸ್ತ್ರ ದಾಳಿಗಳನ್ನು ಎದುರಿಸಲು ರಾಜ್ಯ ಪೊಲೀಸ್ ಪಡೆಗಳು ವಿಫಲವಾದ ಬಳಿಕ, ಭಾರತೀಯ ಗಡಿ ಭದ್ರತಾ ಪಡೆಯನ್ನು (ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್) ಸ್ಥಾಪಿಸಲಾಯಿತು.* ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಜೊತೆಗಿನ ಭಾರತದ ಗಡಿಯನ್ನು ಸುರಕ್ಷಿತವಾಗಿಸಲು ಒಂದು ಕೇಂದ್ರೀಯ ನಿಯಂತ್ರಣದ ಪಡೆಯ ಅವಶ್ಯಕತೆ ಇದೆ ಎಂದು ಮನಗಂಡು, ಡಿಸೆಂಬರ್ 1, 1965ರಂದು ಬಿಎಸ್ಎಫ್ ಅನ್ನು ಸ್ಥಾಪಿಸಲಾಯಿತು. ಆರಂಭವಾದಾಗ ಬಿಎಸ್ಎಫ್ 25 ಬಟಾಲಿಯನ್ಗಳನ್ನು ಹೊಂದಿತ್ತು. ಆ ಬಳಿಕದ ವರ್ಷಗಳಲ್ಲಿ ಬಿಎಸ್ಎಫ್ ಅಸಾಧಾರಣವಾಗಿ ಬೆಳೆದಿದ್ದು, ಇಂದು 192 ಬಟಾಲಿಯನ್ಗಳನ್ನು ಹೊಂದಿ, 6,386 ಕಿಲೋಮೀಟರ್ಗಳಿಗೂ ಹೆಚ್ಚು ವ್ಯಾಪ್ತಿಯ ಭಾರತದ ಅಂತಾರಾಷ್ಟ್ರೀಯ ಗಡಿಗಳನ್ನು ರಕ್ಷಿಸುತ್ತಿದೆ.* ಗಡಿ ಭದ್ರತಾ ಪಡೆಯು ಅಸಾಧಾರಣ ಸೇವೆ ಸಲ್ಲಿಸುತ್ತಿದೆ ಎಂದು ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಶ್ಲಾಘಿಸಿದರು.