* ಅಮೆರಿಕದ ಟೆಕ್ಸಾಸ್ ಮೂಲದ ಫೈರ್ಫ್ಲೈ ಏರೋಸ್ಪೇಸ್ ಎಂಬ ಖಾಸಗಿ ಕಂಪನಿ ನಿರ್ಮಿಸಿದ 'ಬ್ಲೂ ಘೋಸ್ಟ್' ಹೆಸರಿನ ಲ್ಯಾಂಡರ್ ಮಾರ್ಚ್ 02 ರಂದು ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿದಿದೆ ಎಂದು ನಾಸಾ ಪ್ರಕಟಿಸಿದೆ.* ಸ್ಪೇಸ್ಎಕ್ಸ್ ಕ್ಷಿಪಣಿಯ ಮೂಲಕ ಈ ವರ್ಷದ ಜನವರಿ 15ರಂದು 'ಬ್ಲೂ ಘೋಸ್ಟ್' ಲ್ಯಾಂಡರ್ ಹೊಂದಿದ್ದ ನೌಕೆಯನ್ನು ಪ್ರವರ್ಧನಗೊಳಿಸಲಾಯಿತು. ಮಾರ್ಚ್ 2ರಂದು ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿದೆ.* "ವಿಜ್ಞಾನಿಗಳ ಮೂರು ವರ್ಷಗಳ ಪರಿಶ್ರಮಕ್ಕೆ ದೊರಕಿದ ಫಲ ಇದು" ಎಂದು ನಾಸಾ ವಿವರಿಸಿದೆ. ಈ ಲ್ಯಾಂಡರ್ ಚಂದ್ರನ ಪೃಶ್ಠವನ್ನು ಸೆರೆಹಿಡಿದ ಚಿತ್ರವನ್ನು ಫೈರ್ಫ್ಲೈ ಏರೋಸ್ಪೇಸ್ ಸಂಸ್ಥೆಯು ಜಾಲತಾಣ 'ಎಕ್ಸ್'ನಲ್ಲಿ ಹಂಚಿದೆ.* 14 ದಿನಗಳ ಸಂಚಾರ : ಕೆಲವು ಅಂತರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ 'ಬ್ಲೂ ಘೋಸ್ಟ್' ಲ್ಯಾಂಡರ್ 14 ದಿನಗಳ ಕಾಲ ಚಂದ್ರನ ಅಂಗಳದಲ್ಲಿ ಸಂಚರಿಸಿ ಹಲವು ಅಧ್ಯಯನಗಳನ್ನು ನಡೆಸಲಿದೆ. "ಚಂದ್ರನ ಪರಿಸರದ ಬಗ್ಗೆ ಹೆಚ್ಚಿನ ಅರಿವಿಗಾಗಿ ಹಾಗೂ ಭವಿಷ್ಯದ ಚಂದ್ರ ಮತ್ತು ಮಂಗಳ ಗಗನಯಾನ ಯೋಜನೆಗಳಿಗೆ ಸಹಾಯವಾಗುವ 10 ವೈಜ್ಞಾನಿಕ ಅಧ್ಯಯನಗಳನ್ನು ಈ ಲ್ಯಾಂಡರ್ ನಡೆಸಲಿದೆ," ಎಂದು ನಾಸಾ 'ಎಕ್ಸ್' ನಲ್ಲಿ ಪ್ರಕಟಿಸಿದೆ.* ಚಂದ್ರನ ಮೇಲ್ಮೈಯ ಗುಣಲಕ್ಷಣಗಳ ವಿಶ್ಲೇಷಣೆ, ಅಲ್ಲಿನ ತಾಪಮಾನ ಬದಲಾವಣೆಗಳು, ಮ್ಯಾಗ್ನೆಟಿಕ್ ಕ್ಷೇತ್ರಗಳ ಬಗ್ಗೆ ಅಧ್ಯಯನ ಮಾಡಲಿದ್ದು, ಈ ಸಂಶೋಧನೆ ವಿಜ್ಞಾನಿಗಳಿಗೆ ಹಲವಾರು ರೀತಿಯಲ್ಲಿ ಉಪಯುಕ್ತವಾಗಲಿದೆ.