* ಚಿಲಿ ದೇಶದ ಮಾಜಿ ಅಧ್ಯಕ್ಷೆ ಮತ್ತು ಜಾಗತಿಕ ಮಾನವ ಹಕ್ಕುಗಳ ಪ್ರತಿಪಾದಕಿ ಮಿಶೆಲ್ ಬಚೆಲೆಟ್ ಅವರಿಗೆ 2024ರ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ. ಲಿಂಗ ಸಮಾನತೆ ಮತ್ತು ದುರ್ಬಲ ಸಮುದಾಯಗಳ ಹಕ್ಕುಗಳಿಗಾಗಿ ಮಾಡಿರುವ ಹೋರಾಟಗಳಿಗಾಗಿ ಮಿಶೆಲ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.* ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಭಾರತದ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ನೇತೃತ್ವದ ಇಂದಿರಾ ಗಾಂಧಿ ಮೆಮೋರಿಯಲ್ ಟ್ರಸ್ಟ್ನ ಅಂತರರಾಷ್ಟ್ರೀಯ ಆಯ್ಕೆ ಮಂಡಳಿಯು ಪ್ರಶಸ್ತಿ ವಿಜೇತರನ್ನು ಘೋಷಿಸಿದೆ.* ಬಚೆಲೆಟ್ ಅವರ ಪೂರ್ಣ ಹೆಸರು ವೆರೊನಿಕಾ ಮಿಶೆಲ್ ಬಚೆಲೆಟ್ ಜೆರಿಯಾ. ಇವರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿ ಎರಡು ಅವಧಿ ಹಾಗೂ ಚಿಲಿಯ ಮೊದಲ ಮಹಿಳಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಲಿಂಗ ಸಮಾನತೆ ಮತ್ತು ಅಲಕ್ಷಿತ ಸಮುದಾಯದ ಹಕ್ಕಿಗಾಗಿ ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರಂತರವಾಗಿ ಹೋರಾಡಿದ್ದಾರೆ.* 1951ರ ಸೆಪ್ಟೆಂಬರ್ 29ರಂದು ಚಿಲಿಯ ಲಾ ಸಿಸ್ಟೆರ್ನಾ ಸಂಟಿಕೊದಲ್ಲಿ ಜನಿಸಿದ ಬಚೆಲೆಟ್, ಆಗುಸ್ಟೊ ಪಿನೊಚೆಟ್ ನಿರಾಂಕುಶ ಅವಧಿಯಲ್ಲಿ ವೈಯಕ್ತಿಕ ಹಾಗೂ ರಾಜಕೀಯ ಸವಾಲುಗಳನ್ನು ಎದುರಿಸಿದ್ದರು. 1973ರಲ್ಲಿ ಬಂಧಿತರಾಗಿ ಶಿಕ್ಷೆಗೆ ಗುರಿಯಾಗಿದ್ದರು. ಆಸ್ಟ್ರೇಲಿಯಾ ಬಳಿಕ ಜರ್ಮನಿಗೂ ಗಡಿಪಾರಾಗಿದ್ದರು. ಇದಾದ ಬಳಿಕ ಚಿಲಿಗೆ ಆಗಮಿಸಿದ ಅವರು, ದೇಶದ ರಾಜಕೀಯ ಬದಲಾವಣೆಗೆ ಅಪಾರ ಕೊಡುಗೆ ನೀಡಿದರು. 2006 ಮತ್ತು 2014ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.* ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಬಚೆಲೆಟ್ ಶಿಕ್ಷಣ ಮತ್ತು ತೆರಿಗೆ ವ್ಯವಸ್ಥೆಗಳಲ್ಲಿ ಸಾಕಷ್ಟು ಸುಧಾರಣೆ ಮಾಡಿದ್ದರು. ಭಾರತ ಮತ್ತು ಚಿಲಿ ನಡುವಿನ ದ್ವಿಪಕ್ಷೀಯ ಸಂಬಂಧ ಅಭಿವೃದ್ಧಿಗೊಳ್ಳುವುದರ ಜೊತೆಗೆ ಉಚಿತ ವ್ಯಾಪಾರ ಒಪ್ಪಂದಕ್ಕೂ ಕೂಡ ಸಹಿ ಹಾಕಲಾಗಿತ್ತು.