* ಎರಡನೇ ಮಹಾಯುದ್ಧದಂತೆಯೇ ಈಗ ಜಗತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ ನಂತರ ಜಗತ್ತಿನಲ್ಲಿ ಹೊಸ ಆರ್ಥಿಕ ಸವಾಲುಗಳು ಉದ್ಭವವಾಗಿವೆ. ಸುಂಕ ಸಮರ ತೀವ್ರಗೊಂಡು, ವಿಶ್ವಸಂಸ್ಥೆಯ ಎಚ್ಚರಿಕೆಯ ನಡುವೆಯೂ ಜಾಗತಿಕ ಆರ್ಥಿಕತೆಯ ಸ್ಥಿತಿಗತಿಯನ್ನು ಬದಲಾಯಿಸಿದೆ.* ಈ ಪೈಪೋಟಿಯ ನಡುವೆ ಭಾರತ ಮಾತ್ರ ಶೇ. 6.5ರ ಬೆಳವಣಿಗೆ ದರದೊಂದಿಗೆ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿದಿದೆ.* ವಿಶ್ವಸಂಸ್ಥೆಯ ಯುಎನ್ಸಿಟಿಎಡ್ ವರದಿ ಪ್ರಕಾರ, ಭಾರತವನ್ನು ಅತಿ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಸೇರಿಸಲಾಗಿದೆ. ಚೀನಾದ ಬೆಳವಣಿಗೆ ದರ ಶೇ. 4.4 ಎಂದು ಅಂದಾಜಿಸಲಾಗಿದ್ದು, ಅಮೆರಿಕ ಹಾಗೂ ಯುರೋಪಿಯನ್ ಒಕ್ಕೂಟದ ಬೆಳವಣಿಗೆ ದರ ಕೇವಲ ಶೇ. 1ರಷ್ಟೆ. ಜರ್ಮನಿ, ಫ್ರಾನ್ಸ್, ಇಟಲಿ ಮತ್ತು ಜಪಾನ್ ಗಳ ಬೆಳವಣಿಗೆ ದರ ಶೇ. 1ಕ್ಕಿಂತ ಕಡಿಮೆ ಇರುವ ನಿರೀಕ್ಷೆಯಿದೆ.* 2024ರ ಕೊನೆಯ ಹಾಗೂ 2025ರ ಆರಂಭದ ಬಳಿಕ ವಿಶ್ವ ವ್ಯಾಪಾರದಲ್ಲಿ ಸ್ವಲ್ಪ ಹೆಚ್ಚು ಚಟುವಟಿಕೆ ಕಂಡುಬಂದರೂ, ಹೊಸ ಸುಂಕ ನೀತಿಗಳ ಪರಿಣಾಮವಾಗಿ ವ್ಯಾಪಾರ ಹಿಮ್ಮುಖವಾಗಿ ಚಲಿಸಲು ಆರಂಭಿಸಿದೆ. ಈ ವ್ಯಾಪಾರ ನೀತಿಗಳ ಅನಿಶ್ಚಿತತೆಯಿಂದ ಜಾಗತಿಕ ವ್ಯವಹಾರ ಮತ್ತು ದೀರ್ಘಾವಧಿಯ ಯೋಜನೆಗಳು ತೊಂದರೆಗೆ ಸಿಲುಕಿವೆ.* ಇಂತಹ ಪರಿಸ್ಥಿತಿಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ಅಸ್ತಿತ್ವದಲ್ಲಿರುವ ವ್ಯಾಪಾರ ಸಂಬಂಧಗಳನ್ನು ಸಮರ್ಥವಾಗಿ ಬಳಸಿಕೊಂಡು, ಬಹುಪಕ್ಷೀಯ ನಿಯಮಗಳು ಮತ್ತು ಪ್ರಾದೇಶಿಕ ವ್ಯವಸ್ಥೆಗಳ ಮೂಲಕ ಪರಸ್ಪರ ಸಹಕಾರವನ್ನು ಹೆಚ್ಚಿಸಬೇಕು. ಇದು ಈಗಿನ ಜಾಗತಿಕ ವ್ಯಾಪಾರ ಸಂಕಷ್ಟಕ್ಕೆ ಪರ್ಯಾಯ ಮಾರ್ಗವನ್ನೂ ಒದಗಿಸಬಲ್ಲದು.