* ದೇಶದಲ್ಲಿಯೇ ಮೊದಲ ಬಾರಿಗೆ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ ಹಾಕುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ₹4.98 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ತಿಳಿಸಿದ್ದಾರೆ.* ಬಿಬಿಎಂಪಿಯ ಪಶುಪಾಲನಾ ವಿಭಾಗ ವತಿಯಿಂದ ಇದೀಗ ಪಾಲಿಕೆ ವ್ಯಾಪ್ತಿಯಲ್ಲಿನ ಬೀದಿ ನಾಯಿಗಳಲ್ಲಿ ಸಂತಾನಹರಣ ಶಸ್ತ್ರ(ABC) ಚಿಕಿತ್ಸೆ ಹಾಗೂ ರೇಬೀಸ್ ರೋಗ ನಿರೋಧಕ ಲಸಿಕೆಯನ್ನು(ARV) ಯಶಸ್ವಿಯಾಗಿ ಹಾಗೂ ನಿಯಮಾನುಸಾರ ಕೊಡುತ್ತಿರುವುದಾಗಿಯೂ ಅವರು ಹೇಳಿದ್ದಾರೆ.* ಬೀದಿ ನಾಯಿಗಳಿಗೆ ಮಾರಕವಾಗಿರುವ ಕೆನೈನ್ ಡಿಸ್ಟೆಂಪರ್, ಕೆನೈನ್ ಹೆಪಟೈಟಿಸ್, ಕೆನೈನ್ ಪಾರ್ವವೈರಸ್, ಕೆನೈನ್ ಪ್ಯಾರಾ ಇನ್ಫ್ಲೂಯೆಂಜಾ, ಕೆನೈನ್ ಲೆಪ್ಟೊಸ್ಪೈರೋಸಿಸ್ (ನಾಯಿಗಳಿಂದ ಮನುಷ್ಯರಿಗೆ ಹರಡಬಹುದಾದ ರೋಗ) ರೋಗಗಳನ್ನು ತಡೆಗಟ್ಟಲು ‘ಸಂಯುಕ್ತ ಲಸಿಕೆ’ ನೆರವಾಗುತ್ತದೆ’ ಎಂದರು.