* ಕರ್ನಾಟಕದ ಭೀಮಗಡ ವನ್ಯಜೀವಿಧಾಮದ 'ಸುತ್ತಲಿನ 11,938 ಹೆಕ್ಟೇರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.* ಇದರಲ್ಲಿ ಒಟ್ಟು 11,413 ಹೆಕ್ಟೇರ್ ಮೀಸಲು ಅರಣ್ಯವಾಗಿದ್ದರೆ, 525 ಹೆಕ್ಟೇರ್ ಕಂದಾಯ ಜಮೀನಾಗಿದೆ. 2023ರ ಆಗಸ್ಟ್ ತಿಂಗಳಲ್ಲಿ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿತ್ತು. ಇದೀಗ ಸಚಿವಾಲಯವು ಅಂತಿಮ ಅಧಿಸೂಚನೆ ಹೊರಡಿಸಿದೆ.* ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿ 119 ಚದರ ಕಿ.ಮೀ. ಈ ವನ್ಯಜೀವಿಧಾಮವು ಮಹದಾಯಿ ನದಿಯ ಜಲಾನಯನ ಪ್ರದೇಶದಲ್ಲಿದೆ. ದಾಂಡೇಲಿ ವನ್ಯಜೀವಿಧಾಮ ಹಾಗೂ ಗೋವಾದ ಮಹದಾಯಿ ವನ್ಯಜೀವಿ ಧಾಮದೊಂದಿಗೆ ಗಡಿ ಹಂಚಿಕೊಂಡಿದೆ.* ಈ ವನ್ಯಜೀವಿಧಾಮದ ವಿಸ್ತೀರ್ಣ 19,402 ಹೆಕ್ಟೇರ್, ಪರಿಸರ ಸೂಕ್ಷ್ಮ ಪ್ರದೇಶವು 13 ಗ್ರಾಮಗಳನ್ನು ಒಳಗೊಂಡಿವೆ. ಕೆಲವೊಂದು ಗ್ರಾಮಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶಕ್ಕಾಗಿ ಕರ್ನಾಟಕ ಸರಕಾರ ಎರಡು ವರ್ಷಗಳೊಳಗೆ ವಲಯ ಮಹಾ ಯೋಜನೆ ಸಿದ್ಧಪಡಿಸಿ ಜಾರಿಗೆ ತರಬೇಕು.* ಕೆಲವೊಮ್ಮೆ ಘೋಷಿತ ಅರಣ್ಯ ಪ್ರದೇಶದ ಆಚೆಗೂ ವನ್ಯ ಜೀವಿಗಳ ಚಲನವಲನಗಳು ಇರುತ್ತವೆ. ಕೆಲ ಪ್ರಾಣಿಗಳು ಘೋಷಿತ ಅರಣ್ಯ ಭಾಗದಿಂದ ಹೊರ ಹೋಗುವುದು ಮತ್ತು ಬೇರೆ ಅರಣ್ಯದಿಂದ ಪ್ರಾಣಿಗಳು ಬಂದು ಹೋಗುವ ಪ್ರಕ್ರಿಯೆಯೂ ನಡೆಯುತ್ತಿರುತ್ತವೆ.* ಹೀಗಾಗಿ ವನ್ಯ ಜೀವಿಗಳ ಚಲನವಲನ ಇರುವ ಪ್ರದೇಶ ಮತ್ತು ವನ್ಯ ಪರಿಸರದ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳ ರಕ್ಷಣೆ ಮಹತ್ವದ್ದಾಗಿರುತ್ತದೆ. ಹೀಗಾಗಿ ಘೋಷಿತ ಅರಣ್ಯಕ್ಕೆ ಹೊಂದಿಕೊಂಡಿರುವ ಕೆಲ ಪ್ರದೇಶಗಳನ್ನು ಸೂಕ್ಷ್ಮ ಪ್ರದೇಶಗಳು ಎಂದು ಪರಿಗಣಿಸಲಾಗುತ್ತದೆ.