* ಒಂದೇ ದಿನದಲ್ಲಿ 79 ವಿರೋಧ ಪಕ್ಷದ ಸಂಸದರನ್ನು ಸಂಸತ್ತಿನಿಂದ ಅಮಾನತುಗೊಳಿಸಿದ ಬಳಿಕ ಇದೀಗ ಮತ್ತೆ 49 ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ಡಿಸೆಂಬರ್ 14 ರಂದು 14 ಸದಸ್ಯರನ್ನು ಅಮಾನತ್ತು ಗೊಳಿಸಲಾಗಿತ್ತು. ಇದು ಈ ಅಧಿವೇಶನದಲ್ಲಿ ಅಮಾನತುಗೊಂಡ ಒಟ್ಟು ಸಂಸದರ ಸಂಖ್ಯೆಯನ್ನು 141 ಕ್ಕೆ ಕೊಂಡೊಯ್ದಿದೆ.* ನ್ಯಾಶನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ಕಾಂಗ್ರೆಸ್ ನಾಯಕರಾದ ಶಶಿ ತರೂರ್ ಮತ್ತು ಕಾರ್ತಿ ಚಿದಂಬರಂ, ಎನ್‌ಸಿಪಿಯ ಸುಪ್ರಿಯಾ ಸುಳೆ ಮತ್ತು ಸಮಾಜವಾದಿ ಪಕ್ಷದ ಡಿಂಪಲ್ ಯಾದವ್ ಸೇರಿದಂತೆ ಹಲವು ಸದಸ್ಯರು ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಂದ ಅಮಾನತುಗೊಂಡಿದ್ದಾರೆ.* ಸಂಸತ್ತಿನ ಇತಿಹಾಸದಲ್ಲಿ 100ಕ್ಕೂ ಅಧಿಕ ಸದಸ್ಯರು ಅಮಾನತುಗೊಂಡಿರುವುದು ಇದೆ ಮೊದಲ ಬಾರಿ, 1989ರ ಮಾರ್ಚನಲ್ಲಿ 63 ಸದಸ್ಯರನ್ನು ಅಮಾನತ್ತು ಮಾಡಲಾಗಿತ್ತು.     * "ಸದನದ ಒಳಗೆ ಭಿತ್ತಿಪತ್ರಗಳನ್ನು ತರಬಾರದು ಎಂದು ನಿರ್ಧರಿಸಲಾಗಿತ್ತು. ಇತ್ತೀಚಿನ ಚುನಾವಣೆಗಳಲ್ಲಿ ಸೋಲು ಕಂಡು ಹತಾಶೆಯಲ್ಲಿರುವ ವಿಪಕ್ಷೀಯ ನಾಯಕರು, ಇಂತಹ ನಡೆ ಅನುಸರಿಸಿದ್ದಾರೆ. ಈ ಕಾರಣದಿಂದ ನಾವು ಅವರ ಅಮಾನತು ನಿಲುವಳಿಯನ್ನು ಮಂಡಿಸುತ್ತಿದ್ದೇವೆ" ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.* "ವಿರೋಧ ಪಕ್ಷವನ್ನು ಸಂಪೂರ್ಣವಾಗಿ ಬಲಿಕೊಡಲಾಗುತ್ತಿದೆ. ಇದರಿಂದ ಯಾವುದೇ ಅರ್ಥಪೂರ್ಣ ಚರ್ಚೆಗಳಿಲ್ಲದೆ ಅಪಾಯಕಾರಿ ಮಸೂದೆಗಳನ್ನು ಅಂಗೀಕರಿಸಬಹುದಾಗಿದೆ. ಡಿ. 13ರಂದು ಲೋಕಸಭೆ ಒಳಗೆ ಬರಲು ಇಬ್ಬರು ಆರೋಪಿಗಳಿಗೆ ಅವಕಾಶ ನೀಡಿದ ಬಿಜೆಪಿ ಸಂಸದರನ್ನು ಬಿಟ್ಟುಬಿಡಲಾಗಿದೆ. 'ನಮೋಕ್ರಸಿ'ಯ ಎಲ್ಲಾ ರೀತಿಯ ದೌರ್ಜನ್ಯಗಳು ಹೊಸ ಸಂಸತ್‌ನಲ್ಲಿ ಬೆಳಕಿಗೆ ಬರುತ್ತಿವೆ" ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ವಾಗ್ದಾಳಿ ನಡೆಸಿದ್ದಾರೆ.