* ಕಳೆದ ವರ್ಷ ಭಾರತದಲ್ಲಿ 10 ಮಿಲಿಯನ್ ಅಮೆರಿಕನ್ ಡಾಲರ್ಗಿಂತ (₹87 ಕೋಟಿ) ಹೆಚ್ಚು ಸಂಪತ್ತು ಹೊಂದಿರುವ ಕೋಟ್ಯಧೀಶರ ಸಂಖ್ಯೆಯಲ್ಲಿ ಶೇ 6ರಷ್ಟು ಹೆಚ್ಚಳವಾಗಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ನೈಟ್ ಫ್ರಾಂಕ್ ವರದಿ ಬುಧವಾರ ತಿಳಿಸಿದೆ.* 2023ರಲ್ಲಿ 80,686 ಇದ್ದ ಕೋಟ್ಯಧೀಶರ ಸಂಖ್ಯೆಯು 2024ರಲ್ಲಿ 85,698ಕ್ಕೆ ತಲುಪಿದೆ. 2028ರ ವೇಳೆಗೆ ಈ ಸಂಖ್ಯೆಯು 93,753ಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಹೇಳಿದೆ.* ಶತಕೋಟಿಪತಿಗಳ ಸಂಖ್ಯೆಯಲ್ಲೂ ವೃದ್ಧಿಯಾಗಿದೆ. ಕಳೆದ ವರ್ಷ ಈ ಪಟ್ಟಿಗೆ ಹೊಸದಾಗಿ 26 ಜನ ಸೇರ್ಪಡೆಯಾಗಿದ್ದು, ಒಟ್ಟು ಶತಕೋಟಿಪತಿಗಳ ಸಂಖ್ಯೆ 191 ಆಗಿದೆ. ಇವರ ಒಟ್ಟು ಸಂಪತ್ತಿನ ಮೌಲ್ಯ ₹82.53 ಲಕ್ಷ ಕೋಟಿ ಆಗಿದೆ ಎಂದು ತಿಳಿಸಿದ್ದಾರೆ.* "ಭಾರತದ ಆರ್ಥಿಕ ಸ್ಥಿರತೆ ಮತ್ತು ದೀರ್ಘಕಾಲೀನ ಬೆಳವಣಿಗೆಯನ್ನು ಇದು ಪ್ರತಿಬಿಂಬಿಸುತ್ತದೆ. ಉದ್ಯಮಶೀಲತೆ, ಜಾಗತಿಕ ಒಕ್ಕೂಟ ಮತ್ತು ಹೊಸ ಉದ್ಯಮ ಕ್ಷೇತ್ರಗಳ ಬೆಳವಣಿಗೆಗಳಿಂದ ಹೈ-ನೆಟ್-ವರ್ಥ್ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ," ಎಂದು ನೈಟ್ ಫ್ರಾಂಕ್ ಇಂಡಿಯಾದ ಅಧ್ಯಕ್ಷ ಶಿಶಿರ್ ಬೈಜಾಲ್ ಹೇಳಿದ್ದಾರೆ.* ಅತಿಹೆಚ್ಚು ಕೋಟ್ಯಧಿಪತಿಗಳನ್ನು ಹೊಂದಿರುವ ಪಟ್ಟಿಯಲ್ಲಿ ಭಾರತವು ಮೂರನೇ ಸ್ಥಾನದಲ್ಲಿದೆ. ಅಮೆರಿಕ ಪ್ರಥಮ ಸ್ಥಾನದಲ್ಲಿದ್ದರೆ, ಚೀನಾ ದ್ವಿತೀಯ ಸ್ಥಾನದಲ್ಲಿದೆ ಎಂದು ವಿವರಿಸಿದೆ.