* ಅಮೆರಿಕದ ಕೃಷಿ ಉತ್ಪನ್ನಗಳ ಮೇಲೆ ಭಾರತ ಶೇ 100ರಷ್ಟು ಸುಂಕ ವಿಧಿಸಿದೆ. ಇತರ ದೇಶಗಳು ಅಧಿಕ ಸುಂಕ ವಿಧಿಸುವ ಕಾರಣ, ಆ ರಾಷ್ಟ್ರಗಳಿಗೆ ಅಮೆರಿಕದ ಉತ್ಪನ್ನ ರಫ್ತು ಮಾಡುವುದು ಕಷ್ಟಸಾಧ್ಯ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.* ಅಮೆರಿಕದ ಸರಕುಗಳ ಮೇಲೆ ಭಾರತ ಹಾಗೂ ಇತರ ರಾಷ್ಟ್ರಗಳು ಹೆಚ್ಚಿದ ಸುಂಕ ವಿಧಿಸುತ್ತಿರುವುದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಬಾರಿ ಟೀಕಿಸಿದ್ದಾರೆ.* ಭಾರತ ಸೇರಿದಂತೆ ಕೆಲವು ದೇಶಗಳ ಸರಕುಗಳ ಮೇಲೆ ಟ್ರಂಪ್ ಘೋಷಿಸಿದ ಪ್ರತಿ ಸುಂಕ ನೀತಿ ಏಪ್ರಿಲ್ 2ರಿಂದ ಜಾರಿಗೆ ಬರಲಿದೆ. ಇದನ್ನು ಅವರು ‘ಅಮೆರಿಕದ ವಿಮೋಚನಾ ದಿನ’ ಎಂದು ಸಂಭ್ರಮಿಸಿದ್ದಾರೆ.* ‘ದುರದೃಷ್ಟವಶಾತ್, ಈ ದೇಶಗಳು ಹಲವಾರು ವರ್ಷಗಳಿಂದ ನಮ್ಮ ಆರ್ಥಿಕ ಸಂಪತ್ತು ಶೋಷಿಸುತ್ತಾ ಬಂದಿವೆ ಮತ್ತು ಅಮೆರಿಕದ ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯ ತೋರುತ್ತವೆ’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೆವಿಟ್ ಹೇಳಿದ್ದಾರೆ.* ಯಾವ ಪ್ರಮಾಣದಲ್ಲಿ ಪ್ರತಿ ಸುಂಕ ವಿಧಿಸಲಾಗುತ್ತದೆ ಮತ್ತು ಅವು ಯಾವ ದೇಶಗಳ ಮೇಲೆ ಪರಿಣಾಮ ಬೀರುತ್ತವೆ ಎಂಬ ವಿವರಗಳನ್ನು ಲೆವಿಟ್ ನೀಡಲಿಲ್ಲ.* ‘ಯುರೋಪಿಯನ್ ಯೂನಿಯನ್ ಅಮೆರಿಕದ ಡೇರಿ ಉತ್ಪನ್ನಗಳ ಮೇಲೆ ಶೇ 50ರಷ್ಟು, ಜಪಾನ್ ಅಮೆರಿಕದ ಅಕ್ಕಿಯ ಮೇಲೆ ಶೇ 700ರಷ್ಟು, ಭಾರತ ಕೃಷಿ ಉತ್ಪನ್ನಗಳ ಮೇಲೆ ಶೇ 100ರಷ್ಟು ಹಾಗೂ ಕೆನಡಾ ಅಮೆರಿಕದ ಬೆಣ್ಣೆ ಮತ್ತು ಚೀಸ್ ಮೇಲೆ ಶೇ 300ರಷ್ಟು ಸುಂಕ ವಿಧಿಸುತ್ತಿವೆ’ ಎಂದು ಲೆವಿಟ್ ಮಾಹಿತಿ ನೀಡಿದ್ದಾರೆ.* 'ಅಮೆರಿಕದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಭಾರತ ಸುಂಕವನ್ನು ಲಕ್ಷಣೀಯವಾಗಿ ಕಡಿಮೆ ಮಾಡಲಿದೆ' ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.* 'ಅನೇಕ ದೇಶಗಳು ತಮ್ಮ ಸುಂಕವನ್ನು ಕೈಬಿಡಬಹುದು ಎಂದು ನಾನು ನಂಬುತ್ತೇನೆ, ಏಕೆಂದರೆ ಅವರು ವರ್ಷಗಳಿಂದ ಅಮೆರಿಕದ ಮೇಲೆ ಅನ್ಯಾಯಕರ ಸುಂಕ ವಿಧಿಸುತ್ತಿದ್ದಾರೆ' ಎಂದು ಅವರು ತಿಳಿಸಿದ್ದಾರೆ.