* ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಆರೋಗ್ಯ ಸಮಸ್ಯೆ ಕಾರಣ ನೀಡಿ ತಮ್ಮ ಸ್ಥಾನಕ್ಕೆ ಜುಲೈ 21 ರಂದು (ಸೋಮವಾರ) ರಾಜೀನಾಮೆ ನೀಡಿದ್ದಾರೆ. ಭಾರತದ ರಾಷ್ಟ್ರಪತಿ ಆಗಿರುವ ದ್ರೌಪದಿ ಮುರ್ಮು ಅವರಿಗೆ ಜಗದೀಪ್ ಧನಕರ್ ಅವರು ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ.* ಸಂವಿಧಾನದ 67(a) ವಿಧಿಯ ಪ್ರಕಾರ ರಾಜೀನಾಮೆ ನೀಡುತ್ತಿರುವುದಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ʻಆರೋಗ್ಯ ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು, ನಾನು ಭಾರತದ ಉಪಾಧ್ಯಕ್ಷ ಸ್ಥಾನಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆʼ ಎಂದು ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.* 74 ವರ್ಷದ ಧನಕರ್ ಅವರು 2022ರ ಆಗಸ್ಟ್ನಲ್ಲಿ ಭಾರತದ ಉಪರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಅಧಿಕಾರದ ಅವಧಿ 2027ರ ವರೆಗೂ ಇತ್ತು. ರಾಜ್ಯಸಭೆಯ ಸಭಾಪತಿಯೂ ಆಗಿರುವ ಅವರು ಜುಲೈ 21 ರಂದು (ಸೋಮವಾರ) ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ಕಲಾಪದಲ್ಲಿ ಪಾಲ್ಗೊಂಡಿದ್ದರು.* ಭಾರತದ ಉಪರಾಷ್ಟ್ರಪತಿ ಆಗುವುದಕ್ಕೂ ಮೊದಲು ಜಗದೀಪ್ ಧನಕರ್ ಅವರು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಚಂದ್ರಶೇಖರ್ ಸಚಿವ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಇದೆ. ಸದ್ಯ ಜಗದೀಪ್ ಧನಕರ್ ಅವರಿಗೆ 74 ವರ್ಷಗಳು ಆಗಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ಮೋದಿ ಅವರನ್ನು ಸ್ಮರಿಸಿದ್ದಾರೆ.* “ಎಲ್ಲಾ ಸಂಸದರಿಂದ ನಾನು ಪಡೆದ ಗೌರವ, ವಿಶ್ವಾಸವನ್ನು ಸದಾ ನೆನಪಿಸಿಕೊಳ್ಳುತ್ತೇನೆ. ನಮ್ಮ ಪ್ರಜಾಪ್ರಭುತ್ವದಲ್ಲಿ ಉಪರಾಷ್ಟ್ರಪತಿಯಾಗಿ ನಾನು ಪಡೆದ ಅನುಭವಗಳು ಮತ್ತು ಒಳನೋಟಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ” ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.