* ತೆಂಗು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.* ತೆಂಗು ಬೆಳೆ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಕೈಗೊಂಡಿದ್ದು, ವಿಶ್ವದಲ್ಲೇ ಅತಿ ಹೆಚ್ಚು ತೆಂಗು ಉತ್ಪಾದನೆ ಮಾಡುವ ದೇಶವಾಗಿದೆ. ತೆಂಗು ಬೆಳೆಗೆ ಸಂಬಂಧಿಸಿದಂತೆ ಅನೇಕ ರೋಗ ಬಾಧೆಗಳು ಹೆಚ್ಚಾಗಿದ್ದು, ಇವುಗಳನ್ನು ನಿಯಂತ್ರಿಸಲು ಹಲವು ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ. ತೆಂಗು ಅಭಿವೃದ್ಧಿ ಮಂಡಳಿಯ ವಿವಿಧ ಕೃಷಿ ವಿಶ್ವವಿದ್ಯಾಲಯಗಳು, ಕೀಟ ಸಂಶೋಧನಾ ಮಂಡಳಿ ಸೇರಿದಂತೆ ಹಲವು ಇತರ ಸಂಸ್ಥೆಗಳ ಜತೆಗೂಡಿ ರೋಗಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.* ಭಾರತದ ಅತಿ ಹೆಚ್ಚು ತೆಂಗು ಬೆಳೆಯುವ ರಾಜ್ಯಗಳಲ್ಲಿ ಈವರೆಗೆ ಕೇರಳ ಮೊದಲ ಸ್ಥಾನದಲ್ಲಿತ್ತು, ಇದೀಗ ಕೇರಳವನ್ನು ಹಿಂದಿಕ್ಕಿರುವ ಕರ್ನಾಟಕ ದೇಶದಲ್ಲಿ ಅತಿ ಹೆಚ್ಚು ತೆಂಗು ಉತ್ಪಾದನೆ ಮಾಡುವ ರಾಜ್ಯವಾಗಿದೆ.* ತೆಂಗಿನಕಾಯಿ ಅಭಿವೃದ್ಧಿ ಮಂಡಳಿ (CDB) ಪ್ರಕಾರ 2022-23 ರಲ್ಲಿ ಕೇರಳ 563 ಕೋಟಿ ತೆಂಗಿನಕಾಯಿಗಳನ್ನು ಉತ್ಪಾದನೆ ಮಾಡಿದ್ದರೆ, ಕರ್ನಾಟಕ 595 ಕೋಟಿ ತೆಂಗಿನಕಾಯಿಗಳನ್ನು ಉತ್ಪಾದನೆ ಮಾಡುವ ಮೂಲಕ ಕೇರಳವನ್ನು ಹಿಂದಿಕ್ಕಿದೆ. * 2021-22ರಲ್ಲಿ ಕೇರಳ 552 ಕೋಟಿ ತೆಂಗಿನಕಾಯಿಗಳನ್ನು ಉತ್ಪಾದನೆ ಮಾಡಿತ್ತು ಮತ್ತು ಇದೇ ಅವಧಿಯಲ್ಲಿ ಕರ್ನಾಟಕ 518 ಕೋಟಿ ತೆಂಗಿನಕಾಯಿಗಳನ್ನು ಉತ್ಪಾದಿಸಿತ್ತು. 2023-24 ಮೊದಲ ಎರಡು ತ್ರೈಮಾಸಿಕದ ಅವಧಿಯಲ್ಲಿ ಕರ್ನಾಟಕ 726 ಕೋಟಿ ತೆಂಗಿನಕಾಯಿಗಳನ್ನು ಉತ್ಪಾದನೆ ಮಾಡುವ ಮೂಲಕ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಇದೇ ಅವಧಿಯಲ್ಲಿ ತಮಿಳುನಾಡು 578 ಕೋಟಿ ತೆಂಗಿನ ಕಾಯಿಗಳನ್ನು ಉತ್ಪಾದನೆ ಮಾಡುವ ಮೂಲಕ ಎರಡನೇ ಸ್ಥಾನದಲ್ಲಿದ್ದರೆ, ಕೇರಳ 564 ಕೋಟಿ ತೆಂಗಿನಕಾಯಿ ಉತ್ಪಾದನೆ ಮಾಡುವ ಮೂಲಕ ಮೂರನೇ ಸ್ಥಾನಕ್ಕೆ ಕುಸಿದಿದೆ. * ಕರ್ನಾಟಕದಲ್ಲಿ ತುಮಕೂರು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಕೊಬ್ಬರಿ ಉತ್ಪಾದನೆಯಲ್ಲಿ ಕೂಡ ತುಮಕೂರು ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಏಷ್ಯಾದಲ್ಲೇ ದೊಡ್ಡ ಕೊಬ್ಬರಿ ಮಾರುಕಟ್ಟೆ ತಿಪಟೂರಿನಲ್ಲಿದೆ.