* ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರ ದಾಳಿ ನಡೆದ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.* ಈ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯು 'ಹೈ ಅಲರ್ಟ್' ಘೋಷಿಸಿ ಗುರುವಾರದಿಂದ ತಾಲೀಮಿಗೆ ಕೈಹಾಕಿದೆ.* ಅರಬ್ಬಿ ಸಮುದ್ರದಲ್ಲಿ, ಯುದ್ಧನೌಕೆ ‘ಐಎನ್ಎಸ್ ಸೂರತ್’ ಮೂಲಕ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಮಧ್ಯಮ ವ್ಯಾಪ್ತಿಯ ನೆಲದಿಂದ ಆಗಸಕ್ಕೆ ಚಿಮ್ಮಬಲ್ಲ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಲಾಗಿದೆ. ಈ ಕಾರ್ಯಾಚರಣೆಯನ್ನು ಮುಂಬೈನ ವೆಸ್ಟರ್ನ್ ನಾವಲ್ ಕಮಾಂಡ್ ಮಾರ್ಗದರ್ಶಿ ಪಾತ್ರದಲ್ಲಿ ನಡೆಸಿತು.* ಐಎನ್ಎಸ್ ಸೂರತ್ ಯುದ್ಧನೌಕೆ ‘ಪ್ರಾಜೆಕ್ಟ್ 15ಬಿ’ ವರ್ಗಕ್ಕೆ ಸೇರಿದ ನಾಲ್ಕನೇ ಹಾಗೂ ಕೊನೆಯ ನೌಕೆ ಆಗಿದೆ.* ಈ ನೌಕೆ ಶತ್ರು ರಾಷ್ಟ್ರಗಳ ಗುರಿಗಳನ್ನು ರಹಸ್ಯವಾಗಿ ನಾಶಪಡಿಸುವ ಸಾಮರ್ಥ್ಯ ಹೊಂದಿದ್ದು, ಭಾರತವು ಯುದ್ಧನೌಕೆ ನಿರ್ಮಾಣ ಹಾಗೂ ಕಾರ್ಯಾಚರಣೆಯಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವುದನ್ನು ತೋರಿಸುತ್ತದೆ.* ಐಎನ್ಎಸ್ ಸೂರತ್ ಬಹುಆಧುನಿಕ ‘ಬ್ರಹ್ಮೋಸ್’ ಹಾಗೂ ‘ಬರಾಕ್–8’ ಕ್ಷಿಪಣಿಗಳಿಂದ ಕೂಡಿದ್ದು, ಜಲಾಂತರ್ಗಾಮಿ ಹಡಗುಗಳಿಗಾಗಿ ಸ್ಪೆಷಲೈಸ್ ಆಯುಧಗಳು ಮತ್ತು ಸಂವೇದಕಗಳನ್ನು ಹೊಂದಿದೆ.* ಸೋನಾರ್ ಹಮ್ಸಾ ಎನ್ಜಿ, ಟಾರ್ಪೆಡೊ ಟ್ಯೂಬ್ ಲಾಂಚರ್ಗಳು, ಎಎಸ್ಡಬ್ಲ್ಯು ರಾಕೆಟ್ ಲಾಂಚರ್ಗಳನ್ನೂ ಒಳಗೊಂಡಿದೆ. ಶತ್ರು ಹಡಗುಗಳು, ಯುದ್ಧವಿಮಾನಗಳು ಹಾಗೂ ಕ್ಷಿಪಣಿಗಳ ದಾಳಿಯನ್ನು ತಡೆಯಲು ಈ ನೌಕೆಗೆ ಸಂಪೂರ್ಣ ಸಾಮರ್ಥ್ಯವಿದೆ ಮತ್ತು ಇತರ ಹಡಗುಗಳ ನೆರವಿಲ್ಲದೇ ಸ್ವತಂತ್ರವಾಗಿ ಕಾರ್ಯಾಚರಣೆ ನಡೆಸಬಲ್ಲದು.