ಭಾರತ–ಜಪಾನ್ ಜಂಟಿ ಕೈಜೋಡಿಕೆಯಲ್ಲಿ ‘ಥರ್ಟಿ ಮೀಟರ್ ಟೆಲಿಸ್ಕೋಪ್’ – ವಿಶ್ವ ಖಗೋಳಶಾಸ್ತ್ರಕ್ಕೆ ಮಹತ್ವದ ಕೊಡುಗೆ* ಭಾರತ ಮತ್ತು ಜಪಾನ್ ದೇಶಗಳು ಜಂಟಿಯಾಗಿ ವಿಶ್ವದ ಅತ್ಯಂತ ಮಹತ್ವಾಕಾಂಕ್ಷೆಯ ಖಗೋಳ ಸಂಶೋಧನಾ ಯೋಜನೆಗಳಲ್ಲಿ ಒಂದಾದ ಥರ್ಟಿ ಮೀಟರ್ ಟೆಲಿಸ್ಕೋಪ್ (Thirty Meter Telescope - TMT) ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಈ ಯೋಜನೆ ಪೂರ್ಣಗೊಂಡರೆ, ಮಾನವಕುಲಕ್ಕೆ ಬಾಹ್ಯಾಕಾಶದ ಕುರಿತಾದ ಅಸಂಖ್ಯಾತ ರಹಸ್ಯಗಳನ್ನು ತಿಳಿಯುವಲ್ಲಿ ಹೊಸ ದಾರಿ ತೆರೆಯಲಿದೆ.* TMT ಒಂದು ಅತಿದೊಡ್ಡ ಆಪ್ಟಿಕಲ್ ಹಾಗೂ ಇನ್ಫ್ರಾರೆಡ್ ದೂರದರ್ಶಕ, ಇದು ಈಗಿನ ದೂರದರ್ಶಕಗಳಿಗಿಂತ 10–15 ಪಟ್ಟು ಶಕ್ತಿಶಾಲಿಯಾಗಿರಲಿದೆ. ಬಾಹ್ಯಾಕಾಶದಲ್ಲಿನ ಅತಿ ದೂರದ ವಸ್ತುಗಳನ್ನೂ ಸಹ ಇದು ಅಪೂರ್ವ ಸ್ಪಷ್ಟತೆಯಿಂದ ನೋಡಬಲ್ಲದು.* ಈ ಯೋಜನೆ ಭಾರತ, ಜಪಾನ್, ಅಮೇರಿಕಾ, ಕೆನಡಾ, ಚೀನಾ ಐದು ದೇಶಗಳ ವೈಜ್ಞಾನಿಕ ಸಂಸ್ಥೆಗಳ ಸಹಯೋಗದಿಂದ ಮುಂದುವರಿಯುತ್ತಿದೆ ಇದು ಜಾಗತಿಕ ಮಟ್ಟದಲ್ಲಿ ವೈಜ್ಞಾನಿಕ ಜ್ಞಾನ ಹಂಚಿಕೆಯ ಅತ್ಯುತ್ತಮ ಉದಾಹರಣೆಯಾಗಿದೆ.* ಟೆಲಿಸ್ಕೋಪ್‌ನ ತಾಂತ್ರಿಕ ವೈಶಿಷ್ಟ್ಯಗಳು - 30 ಮೀಟರ್ ಉದ್ದದ ಪ್ರಮುಖ ಕನ್ನಡಿ — ವಿಶ್ವದ ಅತಿದೊಡ್ಡ ಪ್ರಾಥಮಿಕ ಕನ್ನಡಿಗಳಲ್ಲಿ ಒಂದು- ಕನ್ನಡಿ 492 ಷಡ್ಭುಜಾಕೃತಿಯ ಸೆಗ್ಮೆಂಟ್‌ಗಳಿಂದ ನಿರ್ಮಿತವಾಗಿದ್ದು, ಇವು ಒಂದೇ ಮಹಾ ಕನ್ನಡಿಯಂತೆ ಕಾರ್ಯನಿರ್ವಹಿಸುತ್ತವೆ.- ಬೃಹತ್ ಬೆಳಕಿನ ಸಂಗ್ರಹಣೆ ಹಾಗೂ ಅತ್ಯಂತ ಸೂಕ್ಷ್ಮ ಸಂಶೋಧನೆಗೆ ವಿಶೇಷ ವಿನ್ಯಾಸ. ಈ ಸಾಮರ್ಥ್ಯದಿಂದ ಬಾಹ್ಯಾಕಾಶದ ಅತ್ಯಂತ ಹಳೆಯ ಗ್ಯಾಲಕ್ಸಿಗಳವರೆಗೆ ಅಧ್ಯಯನ ಸಾಧ್ಯವಾಗಲಿದೆ.* ಭಾರತೀಯ ವಿಜ್ಞಾನಿಗಳು ಈ ಯೋಜನೆಯಲ್ಲಿ ಪ್ರಮುಖ ತಾಂತ್ರಿಕ ಭಾಗಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ: ಕನ್ನಡಿ ಸೆಗ್ಮೆಂಟ್‌ಗಳ ನ್ಯಾನೋ ಮಟ್ಟದ ಸರಿಹೊಂದಾಣಿಕೆ (precision alignment–nano meter level), ಆಪ್ಟೋ–ಮೆಕ್ಯಾನಿಕಲ್ ವ್ಯವಸ್ಥೆಗಳು, ಆಕ್ಟಿವೇಟರ್‌ಗಳು ಮತ್ತು ನಿಯಂತ್ರಣ ಘಟಕಗಳು ಈ ಕೆಲಸವನ್ನು IIA (ಬೆಂಗಳೂರು), IUCAA (ಪುಣೆ), ಮತ್ತು ARIES (ನೈನಿತಾಲ್) ಸಂಸ್ಥೆಗಳು ಸಮಗ್ರವಾಗಿ ಮುನ್ನಡೆಸುತ್ತಿವೆ.* ಆರಂಭದಲ್ಲಿ ಟೆಲಿಸ್ಕೋಪ್‌ನ್ನು ಹವಾಯಿ ದ್ವೀಪದ ಮೌನಾ ಕೀ ಪರ್ವತದಲ್ಲೇ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ ಸ್ಥಳೀಯರ ಸಾಂಸ್ಕೃತಿಕ ವಿರೋಧದಿಂದ ನಿರ್ಮಾಣ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಪ್ರಸ್ತುತ ಸ್ಪೇನ್ ಪರ್ಯಾಯ ಸ್ಥಳವಾಗಿ ಪರಿಗಣನೆ ಹಾಗೂ ಭಾರತದ ಲಡಾಖ್–ಹಾನ್ಲೆ ಪ್ರದೇಶವೂ ಚರ್ಚೆಯಲ್ಲಿದೆ. ಈ ಜಾಗತಿಕ ಮಟ್ಟದ ಯೋಜನೆ 2030ರ ದಶಕದ ಮಧ್ಯಭಾಗದಲ್ಲಿ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.* ಭಾರತ ಮತ್ತು ಜಪಾನ್ ರಾಷ್ಟ್ರಗಳು TMT ಹೊರತಾಗಿಯೂ ಚಂದ್ರ ಸಂಶೋಧನೆಯಲ್ಲಿ ಜಂಟಿಯಾಗಿ ಕೆಲಸ ಮಾಡುತ್ತಿದ್ದು, LUPEX ಮಿಷನ್ ಇವರ ಪ್ರಮುಖ ಸಹಯೋಗಗಳಲ್ಲಿ ಒಂದು. ಇದರ ಉದ್ದೇಶ — ಚಂದ್ರನ ಮೇಲ್ಮೈಯಲ್ಲಿ ನೀರಿನ ಅಸ್ತಿತ್ವವನ್ನು ಪತ್ತೆಹಚ್ಚುವುದು.