* 6 ಬಾರಿಯ ವಿಶ್ವ ಚಾಂಪಿಯನ್, ಭಾರತದ ಖ್ಯಾತ ಬಾಕ್ಸರ್ ಮೇರಿ ಕೋಮ್ ಅವರು ಮುಂಬರುವ ಒಲಿಂಪಿಕ್ಸ್ 2024 ರ ಪ್ಯಾರಿಸ್‌ ಒಲಿಂಪಿಕ್ಸ್ಗೆ ನೇಮಿಸಿದ್ದ ಭಾರತದ ಷೆಫ್-ಡಿ-ಮಿಷನ್(chef-de-mission) ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ವೈಯಕ್ತಿಕ ಕಾರಣಗಳನ್ನು ನೀಡಿ ಮೇರಿ ಕೋಮ್ ಅವರು ಈ ಹುದ್ದೆಯಿಂದ ಕೆಳಗಿಳಿದಿರುವುದಾಗಿ ಪಿಟಿಐ ತನ್ನ ವರದಿಯಲ್ಲಿ ತಿಳಿಸಿದೆ.* ಕೋಮ್ ಅವರು ತಂಡದ ನಾಯಕ ಮತ್ತು ಪ್ರತಿನಿಧಿಯಾಗಿ ಸೇವೆ ಸಲ್ಲಿಸಬೇಕಾಗಿತ್ತು, ಕ್ರೀಡಾಕೂಟದಲ್ಲಿ ತಮ್ಮ ದೇಶದ ಭಾಗವಹಿಸುವಿಕೆಯ ಎಲ್ಲಾ ಅಂಶಗಳನ್ನು ಸಂಘಟಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದ್ದರು ಆದರೆ ಈಗ ಈ ಚೆಫ್-ಡಿ-ಮಿಷನ್ ಸ್ಥಾನವನ್ನು ತ್ಯಜಿಸಿದ್ದಾರೆ.* ಷೆಫ್-ಡಿ-ಮಿಷನ್ ಎಂದರೇ: ಕ್ರೀಡಾಪಟುಗಳ ಮೇಲ್ವಿಚಾರಣೆ ಮಾಡುವುದು, ಪ್ರಯಾಣದ ವ್ಯವಸ್ಥೆಗಳನ್ನು ಸಂಯೋಜಿಸುವುದು, ಆತಿಥೇಯ ದೇಶದ ಒಲಿಂಪಿಕ್ ಸಂಘಟನಾ ಸಮಿತಿಯೊಂದಿಗೆ ಸಂಪರ್ಕ ಸಾಧಿಸುವುದು, ಒಲಿಂಪಿಕ್ ನಿಯಮಗಳು ಮತ್ತು ನಿಬಂಧನೆಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವುದು, ಉದ್ಭವಿಸಬಹುದಾದ ಯಾವುದೇ ಸಮಸ್ಯೆಗಳು ಅಥವಾ ವಿವಾದಗಳನ್ನು ನಿಭಾಯಿಸುವುದು ಮತ್ತು ಕ್ರೀಡಾಕೂಟದುದ್ದಕ್ಕೂ ಕ್ರೀಡಾಪಟುಗಳು ಮತ್ತು ತಂಡದ ಅಧಿಕಾರಿಗಳಿಗೆ ಬೆಂಬಲ ಮತ್ತು ಮಾರ್ಗದರ್ಶನವನ್ನು ಒದಗಿಸುವುದು. ತಮ್ಮ ದೇಶದ ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಮತ್ತು ಯಶಸ್ವಿಯಾಗಲು ಉತ್ತಮವಾದ ವಾತಾವರಣವನ್ನು ಹೊಂದಲೆಂದು ಷೆಫ್-ಡಿ-ಮಿಷನ್ ಎನ್ನುವ ವಿಶೇಷ ಯೋಜನೆಯನ್ನು ಜಾರಿಗೆ ತರಲಾಗಿತ್ತು.  * ಮೇರಿ 2012ರ ಒಲಿಂಪಿಕ್ಸ್ ಕಂಚಿನ ಪದಕ ಗೆದ್ದ ಸಾಧಕಿಯೂ ಆಗಿದ್ದಾರೆ. ಐದು ಬಾರಿ ಏಷ್ಯನ್ ಚಾಂಪಿಯನ್ ಆಗಿರುವ ಅವರು 2014 ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಪಡೆದ ಭಾರತದ ಮೊದಲ ಮಹಿಳಾ ಬಾಕ್ಸರ್. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ.