* ಭಾರತ–ಪಾಕಿಸ್ತಾನ ನಡುವಿನ ಸಂಪರ್ಕದ ಪ್ರಮುಖ ಕೊಂಡಿಯಾಗಿದ್ದ ಅಟ್ಟಾರಿ–ವಾಘಾ ಗಡಿಯನ್ನು ಮೇ 1ರ ಗುರುವಾರದಿಂದ ಸಂಪೂರ್ಣವಾಗಿ ಮುಚ್ಚಲಾಗಿದೆ.* ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನಿ ಪ್ರಜೆಗಳಿಗೆ ನೀಡಿದ್ದ ವೀಸಾಗಳನ್ನು ರದ್ದುಗೊಳಿಸಿದ್ದು, ಏಪ್ರಿಲ್ 29ರೊಳಗೆ ದೇಶ ಬಿಟ್ಟುಕೊಳ್ಳುವಂತೆ ಸೂಚಿಸಿತ್ತು.* ಇದರ ಪರಿಣಾಮವಾಗಿ ಎರಡೂ ದೇಶಗಳ ನಾಗರಿಕರು ಗಡಿಯ ಮೂಲಕ ತ್ವರಿತವಾಗಿ ಸ್ವದೇಶಕ್ಕೆ ಮರಳಲು ಯತ್ನಿಸಿದ ಕಾರಣ ಗಡಿಯಲ್ಲಿ ಒಂದೇ ವಾರ ಗೊಂದಲದ ಪರಿಸ್ಥಿತಿ ಉಂಟಾಗಿದೆ.* ಗಡಿ ಈಗ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದು, ಗುರುವಾರ ಎರಡೂ ದೇಶಗಳ ಪ್ರಜೆಗಳು ಇನ್ನೊಂದು ದೇಶಕ್ಕೆ ಪ್ರಯಾಣಿಸುತ್ತಿರುವುದಿಲ್ಲ ಎಂದು ಮೂಲಗಳು ತಿಳಿಸಿವೆ.* ಬುಧವಾರ(ಏಪ್ರಿಲ್ 30) ಪಾಕಿಸ್ತಾನದ 125 ಮಂದಿ ವಾಘಾ ಗಡಿಯ ಮೂಲಕ ಭಾರತವನ್ನು ತೊರೆದಿದ್ದು, ಈ ಮೂಲಕ ಕಳೆದ ಏಳು ದಿನಗಳಲ್ಲಿ ಭಾರತ ತೊರೆದ ಪಾಕಿಸ್ತಾನಿ ಪ್ರಜೆಗಳ ಸಂಖ್ಯೆ 911ಕ್ಕೆ ಏರಿದೆ. ಪಾಕಿಸ್ತಾನದ ವೀಸಾ ಹೊಂದಿದ್ದ ಭಾರತದ 15 ಮಂದಿ ಕೂಡಾ ಬುಧವಾರ ಪಾಕಿಸ್ತಾನ ಪ್ರವೇಶಿಸಿದ್ದಾರೆ.* ಇದಲ್ಲದೆ, ಬುಧವಾರ ಭಾರತದಲ್ಲಿ ತಂಗಲು ದೀರ್ಘಾವಧಿ ವೀಸಾ ಹೊಂದಿದ್ದ ಪಾಕಿಸ್ತಾನದ 73 ಮಂದಿ ಹಾಗೂ ಭಾರತದ 152 ಮಂದಿ ಗಡಿ ದಾಟಿ ಭಾರತಕ್ಕೆ ಬಂದಿದ್ದಾರೆ. ಇದರಿಂದ ಪಾಕಿಸ್ತಾನದಿಂದ ಭಾರತಕ್ಕೆ ಬಂದವರ ಒಟ್ಟು ಸಂಖ್ಯೆ 1,617ಕ್ಕೆ ತಲುಪಿದೆ.