* ಬೆಲೆ ಏರಿಕೆ ವಿರುದ್ಧ ಆಕ್ರೋಶದ ನಡುವೆ ಕರ್ನಾಟಕ ಸರ್ಕಾರ ಅನ್ನಭಾಗ್ಯ ಯೋಜನೆಯಲ್ಲಿ ಹಣದ ಬದಲಿಗೆ ಈ ತಿಂಗಳಿನಿಂದ 5 ಕೆಜಿ ಅಕ್ಕಿ ವಿತರಿಸಲು ನಿರ್ಧರಿಸಿದೆ. ಅಗತ್ಯ ಅಕ್ಕಿ ಲಭ್ಯವಿದ್ದು, ವಿತರಣೆಗೆ ಸರ್ಕಾರ ಸಿದ್ಧವಾಗಿದೆ.* ಅನ್ನಭಾಗ್ಯ ಯೋಜನೆಯಡಿ ಈವರೆಗೆ ನೀಡುತ್ತಿದ್ದ ₹170 ಹಣಕಾಸು ಸಹಾಯವನ್ನು ಈ ತಿಂಗಳಿನಿಂದ ಸ್ಥಗಿತಗೊಳಿಸಲಾಗಿದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಪ್ರಕಟಿಸಿದ್ದಾರೆ. ಇದ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡುವ ಸಾಧ್ಯತೆ ಇದೆ.* 2023ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಸರ್ಕಾರವು ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಯನ್ನು ಘೋಷಿಸಿತ್ತು. ಇದರಂತೆ ಅನ್ನಭಾಗ್ಯ ಫಲಾನುಭವಿಗಳಿಗೆ ಹಣ ನೀಡಲಾಗುತ್ತಿತ್ತು.* ಯೋಜನೆಯಡಿ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿತ್ತು. ಆ ನಂತರದ ದಿನಗಳಲ್ಲಿ ಅಕ್ಕಿ ದಾಸ್ತಾನು ಕಡಿಮೆಯಾದ ಕಾರಣದಿಂದ 5 ಕೆಜಿ ಅಕ್ಕಿ ಕೊಟ್ಟು, ಉಳಿದ 5 ಕೆಜಿ ಅಕ್ಕಿ ಬದಲಿಗೆ 170 ರೂ. ಹಣವನ್ನು ನೀಡಲಾಗುತ್ತಿತ್ತು. ಇದೀಗ ಅಕ್ಕಿ ಲಭ್ಯವಿರುವ ಹಿನ್ನೆಲೆ ಈ ತಿಂಗಳಿನಿಂದಲೇ ಉಳಿದ 5 ಕೆಜಿ ಅಕ್ಕಿ ವಿತರಿಸಲು ತೀರ್ಮಾನಿಸಿದೆ.* ಅನ್ನಭಾಗ್ಯ ಯೋಜನೆಯಲ್ಲಿ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರವೂ 5 ಕೆಜಿ ಅಕ್ಕಿ ನೀಡಲು ಘೋಷಿಸಿದ್ದರೂ, ಕೇಂದ್ರದಿಂದ ವಿಳಂಬವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಣ ಪಾವತಿಸುತಿತ್ತು. ಆದರೆ ಕಳೆದ ಐದು ತಿಂಗಳಿನಿಂದ ಹಣ ಬಿಡುಗಡೆ ಆಗದ ಕಾರಣ ಫಲಾನುಭವಿಗಳ ಆಕ್ರೋಶ ವ್ಯಕ್ತವಾಯಿತು. ಇದೀಗ ಸರ್ಕಾರ ಹಣದ ಬದಲಿಗೆ ಮತ್ತೆ ಅಕ್ಕಿ ನೀಡುವ ನಿರ್ಧಾರ ಕೈಗೊಂಡಿದೆ.* ತಾಂತ್ರಿಕ ತೊಂದರೆಗಳು, ಆಧಾರ್ ಜೋಡಣೆಯ ಕೊರತೆ, ಖಾತೆ ಇಲ್ಲದವರು, ಹಾಗೂ ಕುಟುಂಬ ಯಜಮಾನರ ಅನುಪಸ್ಥಿತಿ ಮುಂತಾದ ಕಾರಣಗಳಿಂದ ಫಲಾನುಭವಿಗಳಿಗೆ ನಗದು ಭಾಗ್ಯ ತಲುಪುತ್ತಿಲ್ಲ. ಅನೇಕ ಜಿಲ್ಲೆಗಳಿಂದ 5 ತಿಂಗಳಿನಿಂದ ಹಣ ಸಿಗದ ದೂರುಗಳು ಕೇಳಿ ಬರುತ್ತಿದ್ದು, ಅನುದಾನದ ಕೊರತೆಯಿಂದ ತಡವಾಗುತ್ತಿದೆ ಎನ್ನಲಾಗಿದೆ.