* ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಘೋಷಿಸಿರುವ ಉಕ್ಕು ಮತ್ತು ಅಲ್ಯೂಮಿನಿಯಂ ಆಮದು ಮೇಲೆ ಹೆಚ್ಚಿಸಿರುವ ಪ್ರತಿಸುಂಕವು ಜೂನ್ 4ರ ಬುಧವಾರದಿಂದ ಜಾರಿಗೆ ಬರಲಿದೆ. * ಇದು ಭಾರತೀಯ ಉಕ್ಕು ಮತ್ತು ಅಲ್ಯೂಮಿನಿಯಂ ರಫ್ತು ವಹಿವಾಟಿಗೆ ತೀವ್ರ ಏಟು ನೀಡಲಿದೆ ಎಂಬ ಆತಂಕ ಎದುರಾಗಿದೆ.* ಟ್ರಂಪ್ ಸುಂಕ ನೀತಿ ವಿರುದ್ಧ ಅಮೆರಿಕದಲ್ಲಿಯೇ ತೀವ್ರ ಅಪಸ್ವರ ಎದ್ದಿದೆ. ಅಲ್ಲಿನ ಹಲವು ನ್ಯಾಯಾಲಯಗಳಲ್ಲಿ ಈ ಕುರಿತು ಪ್ರಕರಣಗಳೂ ದಾಖಲಾಗಿವೆ. ಇಂತಹ ಸಂದರ್ಭದಲ್ಲಿಯೇ ಟ್ರಂಪ್ ಉಕ್ಕು ಮತ್ತು ಅಲ್ಯೂಮಿನಿಯಂ ಆಮದು ಸುಂಕ ಹೆಚ್ಚಿಸಿದ್ದಾರೆ.* ಕೆನಡಾ, ಬ್ರೆಜಿಲ್, ಮೆಕ್ಸಿಕೊಗಳು ಅಮೆರಿಕಕ್ಕೆ ಅತ್ಯಧಿಕ ಪ್ರಮಾಣದಲ್ಲಿ ಉಕ್ಕು ಮತ್ತು ಅಲ್ಯೂಮಿನಿಯಂ ರಫ್ತು (ಶೇ.49) ಮಾಡುತ್ತವೆ. ಭಾರತವು ವರ್ಷಕ್ಕೆ ಸುಮಾರು 42 ಸಾವಿರ ಕೋಟಿ ರೂ. ಮೌಲ್ಯದ ಉಕ್ಕು ಮತ್ತು ಅಲ್ಯೂಮಿನಿಯಂ ಉತ್ಪನ್ನ ರಫ್ತು ಮಾಡುತ್ತಿದೆ. ಆ ಪೈಕಿ ಎಂಜಿನಿಯರಿಂಗ್ ಉತ್ಪನ್ನಗಳ ಪಾಲು ಶೇ.25ರಷ್ಟಿದೆ.* ಮಾರ್ಚ್ 18ರಂದು ಅಮೆರಿಕ ವಿಧಿಸಿರುವ ಶೇ.25 ಪ್ರತಿಸುಂಕದಿಂದ ವ್ಯಾಪಾರದ ಹರಿವಿಗೆ ಧಕ್ಕೆಯಾಗಿದೆ. ಈಗ ಅದನ್ನು ದುಪ್ಪಟ್ಟುಗೊಳಿಸಿದರೆ ರಫ್ತು ಮತ್ತಷ್ಟು ಕುಸಿಯುತ್ತದೆ ಎಂದು ಎಂಜಿನಿಯರಿಂಗ್ ರಫ್ತು ಉತ್ತೇಜನ ಮಂಡಳಿ (ಇಇಪಿಸಿಐ) ಅಧ್ಯಕ್ಷ ಪಂಕಜ್ ಚಡ್ಡಾ ಅವರು ತಿಳಿಸಿದ್ದಾರೆ.* ಸುಂಕ ದುಪ್ಪಟ್ಟು ಗೊಳಿಸುವುದರಿಂದ ಭಾರತದ ರಫ್ತುದಾರರ ಬಲವನ್ನು ಕುಗ್ಗಿಸುತ್ತದೆ ಎಂದು ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (ಜಿಟಿಆರ್ಐ) ಸಂಸ್ಥಾಪಕ ಅಜಯ್ ಶ್ರೀವಾತ್ಸವ ಸಹ ಆತಂಕ ವ್ಯಕ್ತಪಡಿಸಿದ್ದಾರೆ. ಟ್ರಂಪ್ ನಡೆಗೆ ಚೀನಾ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ಟ್ರಂಪ್ ಸುಂಕ ನೀತಿ ವಿರುದ್ಧ ಭಾರತ ಈಗಾಗಲೇ ವಿಶ್ವ ವ್ಯಾಪಾರ ಸಂಘಟನೆಗೆ ದೂರು ದಾಖಲಿಸಿದೆ.