* ಅಮೆರಿಕ ಮತ್ತು ಚೀನಾ ಸುಂಕ ಸಮರಕ್ಕೆ ತಾತ್ಕಾಲಿಕ ವಿರಾಮ ನೀಡಿದ್ದು, ಮುಂದಿನ 90 ದಿನಗಳ ಕಾಲ ಪರಸ್ಪರರ ಮೇಲೆ ವಿಧಿಸಿದ್ದ ಭಾರಿ ಪ್ರಮಾಣದ ಪ್ರತಿಸುಂಕವನ್ನು ತಗ್ಗಿಸಲು ಒಪ್ಪಂದ ಮಾಡಿಕೊಂಡಿವೆ.* ಈ ಮಹತ್ವದ ಬೆಳವಣಿಗೆ ಸ್ವಿಟ್ಜರ್ಲೆಂಡ್ನ ವಿಶ್ವಸಂಸ್ಥೆ ರಾಯಭಾರಿ ನಿವಾಸದಲ್ಲಿ ಎರಡು ದಿನಗಳ ಮಾತುಕತೆಯ ಫಲವಾಗಿದೆ.* ಎರಡೂ ದೇಶಗಳು ನಾಟಕೀಯ ರೀತಿಯಲ್ಲಿ ತಮ್ಮ ಪ್ರತಿಸುಂಕ ನೀತಿಗಳನ್ನು ಸಡಿಲಗೊಳಿಸಿರುವ ಬಗ್ಗೆ ಭಾನುವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.* ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರ ಪ್ರಕಾರ, ಚೀನಾದ ಉಪಾಧ್ಯಕ್ಷ ಹಿ ಲಿಫೆಂಗ್ ಮತ್ತು ವ್ಯಾಪಾರ ಪ್ರತಿನಿಧಿ ಲಿ ಚೆಂಗ್ಗಾಂಗ್ ಜೊತೆಗೆ ನಡೆದ ಮಾತುಕತೆ ಅತ್ಯಂತ ಅನುಕೂಲಕರವಾಗಿತ್ತು.* ಈ ಮಾಹಿತಿ ಬಹಿರಂಗವಾದ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿದೆ. ಚೀನಾ, ಈ ಮಾತುಕತೆ ಜಾಗತಿಕ ಹಿತದೃಷ್ಟಿಯಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟಿದ್ದು, ಅಮೆರಿಕ ಜೊತೆಗೆ ಸುಂಕ ಸಮಸ್ಯೆ ಪರಿಹಾರಕ್ಕೆ ಮುಂದುವರಿಯುವುದಾಗಿ ತಿಳಿಸಿದೆ.* ಅಮೆರಿಕವು, ಚೀನಾ ಫೆಂಟನೆಲ್ ತಯಾರಿಕೆಗೆ ಬೇಕಾದ ರಾಸಾಯನಿಕ ರಫ್ತು ಮಾಡುತ್ತಿದೆ ಎಂದು ಆರೋಪಿಸಿ ಶೇ. 20ರಷ್ಟು ಹೆಚ್ಚು ಸುಂಕ ವಿಧಿಸಿದ್ದರೆ, ಚೀನಾ ಅದನ್ನು ಪ್ರತಿಯಾಗಿ ವಿರುದ್ಧ ಕ್ರಮ ಕೈಗೊಂಡಿತ್ತು.* ಇದೀಗ ಈ ವಿಚಾರದಲ್ಲೂ ಪರಿಹಾರ ಹುಡುಕಲು ಮಾತುಕತೆ ನಡೆಯುತ್ತಿದೆ. ಅಮೆರಿಕ ವ್ಯಾಪಾರದ ಹಿತಕ್ಕಾಗಿ ಸಮತೋಲಿತ ನೀತಿಯ ಅಗತ್ಯವಿದೆ ಎಂದು ಉಲ್ಲೇಖಿಸಿದೆ.* ಚೀನಾ, ಏಪ್ರಿಲ್ 2ರಿಂದ ಅಮೆರಿಕದ ಸುಂಕ ನೀತಿಯ ವಿರುದ್ಧ ತೆಗೆದುಕೊಂಡ ಕ್ರಮಗಳನ್ನು ಹಿಂಪಡೆಯಲಿದ್ದು, ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಮಾತುಕತೆ ನಡೆಯಲಿದೆ ಎಂದು ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ.* ಆದರೆ 90 ದಿನಗಳ ನಂತರ ಪರಿಸ್ಥಿತಿ ಹೇಗಿರಲಿದೆ ಎಂಬ ಕುತೂಹಲ ಮುಂದುವರೆದಿದೆ. ಈ ಅವಧಿಯಲ್ಲಿ ಶಾಶ್ವತ ಪರಿಹಾರ ದೊರಕುತ್ತದೆಯೇ ಎಂಬುದೇ ವಿಶ್ವದ ಗಮನಾರ್ಹ ವಿಷಯವಾಗಿದೆ.