* ಭಾರತವು ಪ್ರತಿಸುಂಕದ ಬಾಧೆ ತಪ್ಪಿಸಿಕೊಳ್ಳಲು ಮುಂದಾಗಿರುವ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ.* ಅಮೆರಿಕವು ಭಾರತದ ಮೇಲೆ ಶೇಕಡಾ 26ರಷ್ಟು ಪ್ರತಿಸುಂಕ ವಿಧಿಸಿದ್ದು, ಇದರ ಜಾರಿಗೆ 90 ದಿನಗಳ ಕಾಲ ವಿರಾಮ ನೀಡಲಾಗಿದೆ. ಈ ವಿರಾಮ ಜುಲೈ 8ರಂದು ಕೊನೆಗೊಳ್ಳಲಿದೆ. ಪ್ರಸ್ತುತ ಶೇಕಡಾ 10ರಷ್ಟು ಸುಂಕ ಮಾತ್ರ ಜಾರಿಯಲ್ಲಿದೆ.* ಬುಧವಾರ(ಏಪ್ರಿಲ್ 30) ಭಾರತೀಯ ನಿಯೋಗವು ದ್ವಿಪಕ್ಷೀಯ ವ್ಯಾಪಾರದ ಕುರಿತು ಚರ್ಚೆ ನಡೆಸಿದ್ದು, ಇದು ಶೀಘ್ರದಲ್ಲೇ ಸಕಾರಾತ್ಮಕ ತೀರ್ಮಾನಕ್ಕೆ ತಲುಪುವ ಸಾಧ್ಯತೆ ಇದೆ.* "ಭಾರತವು ಜಗತ್ತಿನ ಅತಿ ದೊಡ್ಡ ಜನಸಂಖ್ಯೆಯ ದೇಶವಾಗಿದ್ದು, ಅತಿಯಾದ ಸುಂಕ ಅಥವಾ ವ್ಯಾಪಾರದ ಅಡೆತಡೆಗಳನ್ನು ಹೊಂದಿಲ್ಲ. ಕರೆನ್ಸಿ ಮೌಲ್ಯವನ್ನು ನಿಗದಿತವಾಗಿ ತನ್ನ ಇಚ್ಛೆಗೆ ತಕ್ಕಂತೆ ಬದಲಾಯಿಸುವ ಪ್ರಯತ್ನವೂ ಮಾಡುತ್ತಿಲ್ಲ.* ಅಲ್ಲದೆ, ಸರ್ಕಾರದ ಸಬ್ಸಿಡಿಗಳೂ ಕಡಿಮೆ ಇವೆ. ಈ ಎಲ್ಲ ಅಂಶಗಳು ಅಮೆರಿಕಕ್ಕೆ ಅನುಕೂಲವಾಗಿದ್ದು, ಭಾರತದೊಂದಿಗೆ ವ್ಯವಹಾರ ಒಪ್ಪಂದದ ಸಾಧ್ಯತೆ ಹೆಚ್ಚಿದೆ," ಎಂದು ಬೆಸೆಂಟ್ ಅಭಿಪ್ರಾಯಪಟ್ಟಿದ್ದಾರೆ.* ಇತ್ತ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, "ಅಮೆರಿಕದ ಉತ್ಪನ್ನಗಳ ಮೇಲೆ ಇತರೆ ರಾಷ್ಟ್ರಗಳು ಹೆಚ್ಚಿನ ಸುಂಕ ವಿಧಿಸುವ ಹಾಗೂ ವ್ಯವಹಾರದಲ್ಲಿ ಅಡೆತಡೆ ತರುವ ಚಟುವಟಿಕೆಯನ್ನು ನಿಲ್ಲಿಸಬೇಕು," ಎಂದು ಒತ್ತಾಯಿಸಿದ್ದಾರೆ.