➤ ಆಂಧ್ರಪ್ರದೇಶದ ರಾಜಧಾನಿ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ದೀರ್ಘಕಾಲದ ಗೊಂದಲಗಳ ನಂತರ, ಅಮರಾವತಿಯನ್ನು (Amaravati) ಆಂಧ್ರಪ್ರದೇಶದ ಏಕೈಕ ಮತ್ತು ಶಾಶ್ವತ ರಾಜಧಾನಿಯನ್ನಾಗಿ ಮಾಡುವ ಮಹತ್ವದ ತೀರ್ಮಾನಕ್ಕೆ ಕೇಂದ್ರ ಸರ್ಕಾರ ಅಧಿಕೃತ ಮುದ್ರೆ ಒತ್ತಿದೆ. ಲೋಕಸಭೆಯಲ್ಲಿ 'ಆಂಧ್ರಪ್ರದೇಶ ಮರುಸಂಘಟನೆ (ತಿದ್ದುಪಡಿ) ಕಾಯ್ದೆ 2026' ಅನ್ನು ಅಂಗೀಕರಿಸುವ ಮೂಲಕ ಅಮರಾವತಿಯನ್ನು ರಾಜ್ಯದ ರಾಜಧಾನಿಯನ್ನಾಗಿ ಘೋಷಿಸಲಾಗಿದೆ. ➤ ಮೂರು ರಾಜಧಾನಿ ವಿವಾದಕ್ಕೆ ಅಂತ್ಯ: ಈ ಹಿಂದೆ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದ 'ಮೂರು ರಾಜಧಾನಿ' (ವಿಶಾಖಪಟ್ಟಣಂ, ಅಮರಾವತಿ, ಕರ್ನೂಲ್) ಪ್ರಸ್ತಾವನೆಯನ್ನು ಕೈಬಿಟ್ಟು, ಈಗ ಅಮರಾವತಿಯನ್ನು ಮಾತ್ರ ಪೂರ್ಣಪ್ರಮಾಣದ ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಆಂಧ್ರಪ್ರದೇಶ ಮರುಸಂಘಟನೆ ಕಾಯ್ದೆಯಡಿ ರಾಜಧಾನಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಬೃಹತ್ ಆರ್ಥಿಕ ಪ್ಯಾಕೇಜ್ ಘೋಷಿಸಿದೆ.  ವಿಶ್ವದರ್ಜೆಯ ಮೂಲಸೌಕರ್ಯ, ಗ್ರೀನ್ ಸಿಟಿ ಪರಿಕಲ್ಪನೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಮರಾವತಿಯನ್ನು ನಿರ್ಮಿಸಲು ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ಮುಂದಾಗಿದೆ.➤ ಹಿನ್ನೆಲೆ : 2014ರಲ್ಲಿ ಆಂಧ್ರಪ್ರದೇಶ ವಿಭಜನೆಯಾದಾಗ ಹೈದರಾಬಾದ್ ತೆಲಂಗಾಣದ ಪಾಲಾಯಿತು. ಆಗಿನ ಸರ್ಕಾರ ಅಮರಾವತಿಯನ್ನು ರಾಜಧಾನಿಯನ್ನಾಗಿ ಆಯ್ಕೆ ಮಾಡಿತ್ತು. ಆದರೆ, ನಂತರ ಬಂದ ಸರ್ಕಾರಗಳು ರಾಜಧಾನಿ ವಿಚಾರದಲ್ಲಿ ಬದಲಾವಣೆ ತಂದಿದ್ದರಿಂದ ಹೂಡಿಕೆದಾರರಲ್ಲಿ ಮತ್ತು ಜನರಲ್ಲಿ ಗೊಂದಲ ಮೂಡಿತ್ತು. ಈಗ ಸಂಸತ್ತಿನಲ್ಲಿ ಅಂಗೀಕಾರವಾಗಿರುವ ನಿರ್ಣಯವು ಈ ಎಲ್ಲಾ ಕಾನೂನು ಹೋರಾಟಗಳಿಗೆ ಬ್ರೇಕ್ ಹಾಕಿದೆ.