* ಭಾರತೀಯ ರಿಸರ್ವ್ ಬ್ಯಾಂಕ್ ( RBI) ಕಳೆದ ಅಕ್ಟೋಬರ್ನಲ್ಲಿ ಮತ್ತೆ 27 ಟನ್ ಚಿನ್ನ ಖರೀದಿಸಲಾಗಿದೆ ಎಂದು ವಿಶ್ವ ಚಿನ್ನದ ಮಂಡಳಿ ತಿಳಿಸಿದೆ. ಈ ಮೂಲಕ ಅತಿ ಹೆಚ್ಚು ಚಿನ್ನ ಖರೀದಿಯಲ್ಲಿ ಭಾರತ ವಿಶ್ವದಲ್ಲೇ ಅಗ್ರಸ್ಥಾನಕ್ಕೇರಿದೆ. * ಚಿನ್ನವನ್ನು ತುರ್ತು ಸಂದರ್ಭಗಳ ವಿಮೆ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಹಣದ ಅವಶ್ಯಕತೆ ಎದುರಾದಾಗ ಚಿನ್ನವನ್ನು ತತ್ಕ್ಷಣದಲ್ಲೇ ನಗದೀಕರಿಸಿಕೊಳ್ಳಬಹುದಾಗಿದೆ. * ಆರ್ಬಿಐನಂತಹ ಕೇಂದ್ರ ಬ್ಯಾಂಕ್ಗಳು ಟನ್ ಗಳ ಲೆಕ್ಕದಲ್ಲಿ ಚಿನ್ನ ಖರೀದಿಸುತ್ತಿವೆ. ವಿವಿಧ ದೇಶಗಳಲ್ಲಿನ ಕೇಂದ್ರೀಯ ಬ್ಯಾಂಕುಗಳು ತಮ್ಮ ಚಿನ್ನದ ಮೀಸಲನ್ನು ಹೆಚ್ಚಿಸುತ್ತಿದ್ದು, ಎಷ್ಟು ಸಾಧ್ಯವೋ ಅಷ್ಟು ಚಿನ್ನ ಖರೀದಿಸುತ್ತಿವೆ.* ಒಟ್ಟಾರೆಯಾಗಿ ಕೇಂದ್ರೀಯ ಬ್ಯಾಂಕ್ಗಳು ಅಕ್ಟೋಬರ್ ತಿಂಗಳಲ್ಲಿ 60 ಟನ್ ಚಿನ್ನ ಖರೀದಿಸಿವೆ.* ಆರ್ಬಿಐ ಪ್ರಸಕ್ತ ವರ್ಷದ ಜನವರಿಯಿಂದ ಅಕ್ಟೊಬರ್ ವರೆಗೆ ಒಟ್ಟು 77 ಟನ್ ಚಿನ್ನ ಖರೀದಿಸಿದೆ ಎಂದು ವಿಶ್ವ ಚಿನ್ನ ಸಮಿತಿ (WGC) ವರದಿ ಗುರುವಾರ (ಡಿಸೆಂಬರ್ 05) ರಂದು ತಿಳಿಸಿದೆ.* 2023 ರ ಅವಧಿಗೆ ಹೋಲಿಸಿದರೆ ಖರೀದಿಯಲ್ಲಿ 5 ಪಟ್ಟು ಹೆಚ್ಚಾಗಿದೆ. ಪ್ರಸ್ತುತ ಆರ್ಬಿಐ ಬಳಿ 882 ಟನ್ ಚಿನ್ನ ಮೀಸಲು ಇದೆ.* ಚಿನ್ನದ ಸಂಗ್ರಹದಲ್ಲಿ ಇತರ ದೇಶಗಳ ಕೇಂದ್ರೀಯ ಬ್ಯಾಂಕ್ಗಳಿಗೆ ಹೋಲಿಸಿದರೆ, ಭಾರತದ ಕೇಂದ್ರ ಬ್ಯಾಂಕ್ ಆಗಿರುವ ‘ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಗ್ರ ಸ್ಥಾನದಲ್ಲಿರುವುದು ವಿಶೇಷ.* ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್ಗಳು 2024ರಲ್ಲಿ ಇದುವರೆಗೆ ಒಟ್ಟು 694 ಟನ್ಗಳಷ್ಟು ಚಿನ್ನ ಖರೀದಿಸಿವೆ ಎಂದು WGC ಹೇಳಿದೆ. ಇದರಲ್ಲಿ ಭಾರತದ ಆರ್ಬಿಐ ಬರೋಬ್ಬರಿ 77 ಟನ್ ಚಿನ್ನ ಖರೀದಿಸಿದೆ.* ಕಳೆದ ಅಕ್ಟೋಬರ್ ತಿಂಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) 27ಟನ್ (27000 ಕೆಜಿ) ಚಿನ್ನ ಖರೀದಿಸಿದೆ. ನಂತರದ ಸ್ಥಾನದಲ್ಲಿ, ಟರ್ನಿ 17ಟನ್ ಚಿನ್ನ ಖರೀದಿಸಿದರೆ, ಪೋಲೆಂಡ್ 8 ಟನ್ ಚಿನ್ನವನ್ನು ಖರೀದಿಸಿದೆ. ಮತ್ತೊಂದೆಡೆ ಕಳೆದ 5 ತಿಂಗಳಿನಿಂದ ಚಿನ್ನ ಮಾರಾಟ ಮಾಡುತ್ತಿದ್ದ ಸೆಂಟ್ರಲ್ ಬ್ಯಾಂಕ್ ಆಫ್ ಕಜಕಿಸ್ತಾನ್ ಅಕ್ಟೋಬರ್ ನಲ್ಲಿ ಮತ್ತೆ ಚಿನ್ನ ಖರೀದಿ ಆರಂಭಿಸಿದೆ.* ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 2650 ಡಾಲರ್ ಆಗಿದೆ. ಮುಂದಿನ ವರ್ಷ ಇದು 3000 ಡಾಲರ್ಗೆ ಹೆಚ್ಚಾಗುವ ನಿರೀಕ್ಷೆಯಿದೆ.