* ಮಹಾತ್ಮ ಗಾಂಧೀಜಿ ಅವರು ಬೆಳಗಾವಿಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿಕೊಂಡು100 ವರ್ಷವಾಗಿರುವ ಕಾರಣ ಅಕ್ಟೋಬರ್ 2 ರಂದು ಗಾಂಧಿ ನಡಿಗೆ ಮತ್ತು ಸ್ವಚ್ಛತೆಯ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸೆಪ್ಟೆಂಬರ್ 28 ರಂದು (ಶನಿವಾರ) ತಿಳಿಸಿದರು.* 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 39 ನೇ ಅಧಿವೇಶನವು ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೆಸ್ ಅಧಿವೇಶನವಾಗಿತ್ತು. ಇದರ ಸ್ಮರಣಾರ್ಥ ಅಕ್ಟೋಬರ್ 2 ರಂದು ಬೆಳಿಗ್ಗೆ 9 ಗಂಟೆಗೆ ಗಾಂಧಿ ಭವನದಿಂದ ವಿಧಾನಸೌಧದ ಬಳಿ ಗಾಂಧಿ ಪ್ರತಿಮೆಯವರೆಗೆ 1 ಕಿಮೀ ಉದ್ದದ ಗಾಂಧಿ ನಡಿಗೆ ಹಮ್ಮಿಕೊಂಡಿದ್ದೇವೆ. * ಈ ಕಾರ್ಯಕ್ರಮದ ಸಂದರ್ಭದಲ್ಲಿ 'ಗಾಂಧಿ ನಡಿಗೆ ಮತ್ತು ಸ್ವಚ್ಛತಾ ಪ್ರತಿಜ್ಞೆ' ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.* ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಇಬ್ಬರ ಜನ್ಮದಿನವೂ ಒಂದೇ ದಿನ ಆಗಿರುವ ಕಾರಣ ಇಬ್ಬರ ಪ್ರತಿಮೆಗೂ ಮಾಲಾರ್ಪಣೆ ಮಾಡಲಾಗುವುದು. ನಂತರ ನಡಿಗೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ವಿಧಾನಸೌಧದ ಬ್ಯಾಂಕ್ನಿಟ್ ಹಾಲ್ ನಲ್ಲಿ ಹಾಗೂ ಬೆಂಗಳೂರಿನ 500 ಶಾಲಾ, ಕಾಲೇಜು ಮಕ್ಕಳಿಗೆ ಜೂಮ್ ಮೂಲಕ ಪ್ರತಿಜ್ಞಾ ವಿಧಿ ಬೋಧನೆ ಮಾಡಲಾಗುವುದು. * ಶ್ವೇತ ವಸ್ತ್ರ ಧರಿಸಿ ನಡಿಗೆ: ಈ ನಡಿಗೆ ವೇಳೆ ಬಿಳಿ ವಸ್ತ್ರ, ಗಾಂಧಿ ಟೋಪಿ ಧರಿಸಿ ಹೆಜ್ಜೆ ಹಾಕುವಂತೆ ಮನವಿ ಮಾಡಲಾಗುವುದು ಇಡೀ ವರ್ಷ ಗಾಂಧೀಜಿ ಅವರ ಆಚಾರ ವಿಚಾರವನ್ನು ಯುವ ಪೀಳಿಗೆಗೆ ತಿಳಿಸಲು ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತ್ಯೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.