* ಅಕ್ಟೋಬರ್ 2 ಭಾರತಕ್ಕೆ ವಿಶೇಷ ದಿನ "ಭಾರತದ ಪಿತಾಮಹ" ಮೋಹನ್ ದಾಸ್ ಕರಮಚಂದ್ ಗಾಂಧಿ ಮತ್ತು ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನವಾಗಿದೆ. ವಿಶ್ವಸಂಸ್ಥೆಯು ಅಕ್ಟೋಬರ್ 2ನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಅಂಗೀಕರಿಸಿದೆ. * ಮೋಹನದಾಸ ಕರಮಚಂದ್ ಗಾಂಧಿ ಅವರು 1869ರ ಅಕ್ಟೋಬರ್ 2 ಗುಜರಾತ್ನ ಪೋರಬಂದರ್ನಲ್ಲಿ ಜನಿಸಿದರು. ಇವರು ಜನಿಸಿ ಇಂದಿಗೆ 155 ವರ್ಷಗಳಾಗಿವೆ. ಗಾಂಧಿ ಜಯಂತಿ ದಿನದಂದು ದೇಶದಾದ್ಯಂತ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಶಾಲಾ ಕಾಲೇಜುಗಳಲ್ಲಿ, ಸರಕಾರಿ ಕಚೇರಿಗಳಲ್ಲಿ ಗಾಂಧೀಜಿಯವರ ಭಾವಚಿತ್ರವನ್ನು ಇಟ್ಟು ಗೌರವ ಸಲ್ಲಿಸಲಾಗುತ್ತದೆ. ಅಂದು ಗಾಂಧೀಜಿಯವರ ಸಾಧನೆ, ಜೀವನ ಚರಿತ್ರೆ ಕುರಿತು ವಿವರಿಸಲಾಗುತ್ತದೆ.* ಮಹಾತ್ಮ ಗಾಂಧಿ ಅವರ ಧೈಯಗಳು: ಅಹಿಂಸೆ ಮೇಲೆ ಮಹಾತ್ಮ ಗಾಂಧಿ ದೃಢವಾಗಿ ನಂಬಿಕೆ ಇಟ್ಟಿದ್ದರು. ದಬ್ಬಾಳಿಕೆಗೆ ಪ್ರತಿರೋಧವನ್ನು ಒಡ್ಡುವ ಸತ್ಯಾಗ್ರಹ ಪರಿಕಲ್ಪನೆಗೆ ಅವರು ಪಥ ನಿರ್ಮಾಪಕರು. ಇವರ ಈ ಧೈಯವು ಭಾರತವನ್ನು ಸ್ವಾತಂತ್ರ್ಯದತ್ತ ಕೊಂಡೊಯ್ಯಿತು. ಮಾತ್ರವಲ್ಲದೆ, ವಿಶ್ವದಾದ್ಯಂತ ನಾಗರಿಕ ಹಕ್ಕುಗಳ ಮತ್ತು ಸ್ವಾತಂತ್ರ್ಯ ಆಂದೋಲನಗಳಿಗೆ ಸ್ಫೂರ್ತಿ ನೀಡಿದೆ.* ಭಾರತ ಎರಡನೇ ಪ್ರಧಾನಮಂತ್ರಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರು 1904ರ ಅಕ್ಟೋಬರ್ 2ರಂದು ಮೊಘಲ್ ಸಾರಾಯ್ ನಲ್ಲಿ ಜನಿಸಿದರು. ಇವರು ಸಹ ಭಾರತದ ಸ್ವಾತಂತ್ರ್ಯಕ್ಕೆ ಅವಿರತವಾಗಿ ಹೋರಾಡಿದವರು. 1921ರಲ್ಲಿ ಗಾಂಧೀಜಿಯವರ ಅಸಹಕಾರ ಚಳವಳಿಯಲ್ಲಿ ಭಾಗವಹಿಸುವ ಸಲುವಾಗಿ ತಮ್ಮ ಓದನ್ನು ಅರ್ಧದಲ್ಲಿಯೇ ಬಿಟ್ಟರು. ಕಾಶಿ ವಿದ್ಯಾಪೀಠವು 1926ರಲ್ಲಿ ಇವರಿಗೆ ಶಾಸ್ತ್ರಿ ಎಂಬ ಬಿರುದನ್ನು ನೀಡಿತ್ತು. ಸ್ವಾತಂತ್ರ್ಯ ಹೋರಾಟಕ್ಕಾಗಿ ಒಟ್ಟು 9 ವರ್ಷಗಳ ಕಾಲ ಕಾರಾಗೃಹವಾಸ ಅನುಭವಿಸಿದರು. ಅಂದರೆ, ಸತ್ಯಾಗ್ರಹ ಚಳವಳಿ ಪ್ರಾರಂಭವಾದ ನಂತರ 1946ರವರೆಗೆ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಶಾಸ್ತ್ರಿಯವರಿಗೆ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ.* ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನ ಮಂತ್ರಿ ಆಗಿದ್ದಾಗ ದೇಶ ಬರಗಾಲವನ್ನು ಎದುರಿಸಬೇಕಾಯಿತು. ಈ ಸಂದರ್ಭ ಸೋಮವಾರ ರಾತ್ರಿ ಊಟವನ್ನು ಬಿಡಲು ಜನರಲ್ಲಿ ಮನವಿ ಮಾಡಿದ್ದರು. ಅಲ್ಲದೆ ತಾವು ಕೂಡ ಸೋಮವಾರದ ಊಟವನ್ನು ತ್ಯಜಿಸಿದರು. ಇದನ್ನು ಶಾಸ್ತ್ರಿಯವರ ಸೋಮವಾರ ಎಂದೇ ಕರೆಯಲಾಗುತ್ತದೆ. 'ಜೈ ಜವಾನ್, ಜೈ ಕಿಸಾನ್' ಎಂಬ ಸಾರ್ವಕಾಲಿಕ ಘೋಷಣೆ ಕೊಟ್ಟವರು ಶಾಸ್ತ್ರಿಗಳು. * ದೇಶವನ್ನು ಬಯಲು ಶೌಚ ಮತ್ತು ಸಾರ್ವತ್ರಿಕ ನೈರ್ಮಲ್ಯ ಗುರಿಯೊಂದಿಗೆ 'ಸ್ವಚ್ಛ ಭರತ್' ಅಭಿಯಾನವನ್ನು 2014 ರ ಅಕ್ಟೋಬರ್ 2 ರಂದು ಆರಂಭಿಸಲಾಗಿದೆ.