* ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಮೇ 7ರಂದು ‘ಆಪರೇಷನ್ ಸಿಂದೂರ’ ಎಂಬ ಹೆಸರಿನಲ್ಲಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಒಂಬತ್ತು ಸ್ಥಳಗಳನ್ನು ಗುರಿಯಾಗಿಸಿ ಕಾರ್ಯಾಚರಣೆ ಆರಂಭಿಸಿದೆ.* ಈ ಕಾರ್ಯಾಚರಣೆಯ ನಿರ್ವಹಣೆಯನ್ನು ಭಾರತೀಯ ವಾಯುಪಡೆ ನಿಖರತೆ ಹಾಗೂ ವೃತ್ತಿಪರತೆಯಿಂದ ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಭಾನುವಾರ ತಿಳಿಸಿದೆ. ಆದರೆ, ಕಾರ್ಯಾಚರಣೆ ಇನ್ನೂ ಮುಂದುವರಿದಿದೆಯೆಂದು ತಿಳಿಸಲಾಗಿದೆ.* ಸಂಘರ್ಷದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳು ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕರಲ್ಲಿ ಗೊಂದಲ ಉಂಟಾಗುತ್ತಿದೆ. ಭಾರತೀಯ ಪೈಲಟ್ ಶಿವಾನಿ ಸಿಂಗ್ ಪಾಕಿಸ್ತಾನದಲ್ಲಿ ಬಂಧಿತರಾಗಿದ್ದಾರೆ ಎಂಬ ಸುಳ್ಳು ಸುದ್ದಿ ಉದಾಹರಣೆಯಾಗಿದೆ.* ಈ ಹಿನ್ನೆಲೆಯಲ್ಲಿ, ಭಾರತೀಯ ವಾಯುಪಡೆ ಮಾಧ್ಯಮಗಳಲ್ಲಿ ಹರಡುತ್ತಿರುವ ಊಹಾಪೋಹಗಳಿಂದ ದೂರವಿರುವಂತೆ ಹಾಗೂ ಮಾಹಿತಿಗಳನ್ನು ಪರಿಶೀಲನೆ ಮಾಡಿಕೊಂಡು ನಂಬುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.* ಪಹಲ್ಗಾಮ್ ದಾಳಿ, ಆಪರೇಷನ್ ಸಿಂದೂರ ಹಾಗೂ ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದ ಕುರಿತು ಚರ್ಚಿಸಲು, ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಹಾಗೂ ಸಂಸತ್ನಲ್ಲಿ ವಿಶೇಷ ಅಧಿವೇಶನ ನಡೆಸುವಂತೆ ಆಗ್ರಹಿಸಿದೆ. ಜೊತೆಗೆ, ಅಮೆರಿಕದ ಪಾತ್ರದ ಕುರಿತು ಪ್ರಶ್ನೆಗಳು ಎದ್ದಿದ್ದು, ಸರಕಾರದ ಸ್ಪಷ್ಟನೆ ನಿರೀಕ್ಷಿಸಲಾಗಿದೆ.* ಕಳೆದ ಶನಿವಾರ ಸಂಜೆ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಕೊಂಡಿದ್ದರೂ, ಪಾಕಿಸ್ತಾನ ರಾತ್ರಿ ಗಡಿಯಲ್ಲಿಯೇ ಉಲ್ಲಂಘನೆ ಮಾಡಿದೆ. ಈ ಪರಿಸ್ಥಿತಿಯಲ್ಲಿ ಭಾನುವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಈ ಸಭೆಯಲ್ಲಿ ರಕ್ಷಣಾ ಸಚಿವ, ವಿದೇಶಾಂಗ ಸಚಿವ, ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗೂ ಮೂರು ಸೇನಾ ಪಡೆಗಳ ಮುಖ್ಯಸ್ಥರು ಭಾಗವಹಿಸಿದರು.