* ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನ ವಿರುದ್ಧ ಭಾರತದ ಪ್ರತೀಕಾರಾತ್ಮಕ ಕ್ರಮಗಳು ಆರಂಭವಾಗಿವೆ. * ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಎತ್ತಿದ ಈ ಬೃಹತ್ ಸೇನೆ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂಬ ಮಾಹಿತಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸರ್ವಪಕ್ಷ ಸಭೆಯಲ್ಲಿ ಹಂಚಿಕೊಂಡಿದ್ದಾರೆ.* ಈ ಕಾರ್ಯಾಚರಣೆ ಇನ್ನೂ ಮುಗಿಯದಿರುವುದನ್ನು ಸ್ಪಷ್ಟಪಡಿಸಿದ ಅವರು, ಪಾಕಿಸ್ತಾನ ಮತ್ತೊಂದು ದಾಳಿ ನಡೆಸಿದರೆ, ಭಾರತವೂ ತಕ್ಷಣವೇ ಪ್ರತಿದಾಳಿ ನಡೆಸುತ್ತದೆ ಎಂದು ಖಚಿತಪಡಿಸಿದ್ದಾರೆ. ಈ ಮಾತುಗಳು ಪಾಕಿಸ್ತಾನದ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ.* ಸರ್ವಪಕ್ಷ ಸಭೆಯಲ್ಲಿ ರಾಜನಾಥ್ ಸಿಂಗ್ ಪಾಕ್ ಆಕ್ರಮಿತ ಕಾಶ್ಮೀರದ 9 ಉಗ್ರರ ನೆಲೆಗಳನ್ನು ಉಡಾಯಿಸಿದ ಕುರಿತು ವಿವರಗಳನ್ನು ನೀಡಿದರು. ಅಲ್ಲದೆ, ಕೆಲವು ಕಾನ್ಫಿಡೆನ್ಷಿಯಲ್ ಮಾಹಿತಿಗಳನ್ನೂ ಹಂಚಿಕೊಂಡಿದ್ದು, ಹೆಚ್ಚಿನ ವಿವರಗಳನ್ನು ರಾಷ್ಟ್ರದ ಭದ್ರತೆ ದೃಷ್ಟಿಯಿಂದ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.* ಸಭೆಯಲ್ಲಿ ವಿಪಕ್ಷಗಳು ಈ ಕಾರ್ಯಾಚರಣೆಗೆ ಬೆಂಬಲ ಸೂಚಿಸಿದ್ದು, ಪಾಕಿಸ್ತಾನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೇಂದ್ರಕ್ಕೆ ಒತ್ತಾಯಿಸಿದ್ದವು.* ವಿಪಕ್ಷಗಳ ಮೆಚ್ಚುಗೆ ಕೂಡ ಈ ಸಂದರ್ಭದಲ್ಲಿ ಗಮನಸೆಳೆದಿದೆ. ಕಾಂಗ್ರೆಸ್ನ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಸರ್ಕಾರದ ಕ್ರಮಗಳಿಗೆ ಬೆಂಬಲ ವ್ಯಕ್ತಪಡಿಸಿದ್ದು, ಆರಂಭದಿಂದಲೂ ನಾವು ಸರ್ಕಾರದೊಂದಿಗೆ ಇದ್ದೇವೆ ಮತ್ತು ಮುಂದೆಯೂ ಇರುತ್ತೇವೆ ಎಂದು ಹೇಳಿದ್ದಾರೆ.* ಎಲ್ಲರೂ ದೇಶದ ಪರ ನಿಲ್ಲಬೇಕು ಎಂಬ ಪ್ರಧಾನಿ ಮೋದಿಯ ಸಂದೇಶವನ್ನು ವಿಪಕ್ಷಗಳಿಗೆ ಹಂಚಲಾಗಿದೆ. ಆದರೆ, ಪ್ರಧಾನಿ ಮೋದಿ ಗೈರಾಗಿರುವುದು ವಿಪಕ್ಷಗಳ ಅಸಮಾಧಾನಕ್ಕೆ ಕಾರಣವಾಯಿತು. ಮಲ್ಲಿಕಾರ್ಜುನ ಖರ್ಗೆ, ಅಸಾದುದ್ದೀನ್ ಓವೈಸಿ, ಹಾಗೂ ಇತರರು ಪ್ರಧಾನಿಯ ಅನುಪಸ್ಥಿತಿಯನ್ನು ಪ್ರಶ್ನಿಸಿದ್ದು, ದೇಶದ ಭದ್ರತೆ ವಿಷಯದಲ್ಲಿ ಮೋದಿಯವರ ಭಾಗವಹಿಸುವಿಕೆ ಅನಿವಾರ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.* ಈ ಎಲ್ಲದಕ್ಕೂ ನಡುವೆಯೂ, ಸೇನೆಯ ಕಾರ್ಯಾಚರಣೆಗೆ ಎಲ್ಲ ಪಕ್ಷಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಒಟ್ಟಿನಲ್ಲಿ, ಆಪರೇಷನ್ ಸಿಂಧೂರವು ಭಾರತವಿರುದ್ಧದ ಉಗ್ರ ಕಾರ್ಯಚಟುವಟಿಕೆಗಳಿಗೆ ಗಟ್ಟಿ ಉತ್ತರ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳವಣಿಗೆಗಳು ಸಂಭವಿಸಬಹುದೆಂಬ ಕುತೂಹಲವನ್ನು ಹುಟ್ಟುಹಾಕಿದೆ.